ಕಾಸರಗೋಡು: ಮಹಿಳೆಯ ಕೊಲೆ, ಚಿನ್ನಾಭರಣ ದರೋಡೆ ಪ್ರಕರಣ; ಇಬ್ಬರು ಸೆರೆ
ಕಾಸರಗೋಡು, ಫೆ. 22: ಚೀಮೇನಿ ಪುಲಿಯನ್ನೂರಿನಲ್ಲಿ ನಿವೃತ್ತ ಶಿಕ್ಷಕಿ ಜಾನಕಿ (65) ಅವರನ್ನು ದರೋಡೆ ಸಂದರ್ಭ ಕೊಲೆಗೈದ ಘಟನೆಗೆ ಸಂಬಂಧಪಟ್ಟಂತೆ ಇಬ್ಬರನ್ನು ತನಿಖಾ ತಂಡ ಬಂಧಿಸಿದ್ದು, ಇನ್ನೋರ್ವ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರನ್ನು ಪುಲಿಯನ್ನೂರು ಚಿರಿಕ್ಕುಳದ ರಿನೇಶ್ ( 27) ಮತ್ತು ವೈಶಾಖ್ (28) ಎಂದು ಗುರುತಿಸಲಾಗಿದ್ದು, ಅರುಣ್ (28) ವಿದೇಶಕ್ಕೆ ಪರಾರಿಯಾದ ಆರೋಪಿ ಎಂದು ತಿಳಿದುಬಂದಿದೆ.
2017ರ ಡಿ. 13ರಂದು ರಾತ್ರಿ 10 ಗಂಟೆಯ ಸುಮಾರಿಗೆ ಮೂವರು ಮುಸುಕುಧಾರಿಗಳು ಜಾನಕಿ ಅವರ ಮನೆಗೆ ನುಗ್ಗಿ ಬೆದರಿಸಿ, ಕಪಾಟಿನ ಕೀಲಿ ಕೈ ಕೇಳಿದ್ದರು. ಕೀಲಿ ಕೈ ನೀಡಲು ಜಾನಕಿ ಅವರು ನಿರಾಕರಿಸಿದಾಗ ಮುಸುಕುಧಾರಿ ತಂಡ ಮಾರಕಾಸ್ತ್ರದಿಂದ ಜಾನಕಿ ಅವರ ಕುತ್ತಿಗೆಗೆ ಕಡಿದು ಕೊಲೆಗೈದಿದ್ದು, ತಡೆಯಲೆತ್ನಿಸಿದ ಅವರ ಪತಿ ಕೃಷ್ಣನ್ ಅವರಿಗೆ ಗಂಭೀರ ಹಲ್ಲೆ ನಡೆಸಿ, ಕಪಾಟಿನಲ್ಲಿದ್ದ ಸುಮಾರು 18 ಪವನ್ ಚಿನ್ನಾಭರಣ, 30 ಸಾವಿರ ರೂ. ನಗದು, ಮೊಬೈಲ್ ದರೋಡೆಗೈದು ಪರಾರಿಯಾಗಿದ್ದರು.
ಒಂದು ಗಂಟೆಗೂ ಅಧಿಕ ಸಮಯ ಪ್ರಜ್ಞೆ ತಪ್ಪಿ ಬಿದ್ದಿದ್ದ ಕೃಷ್ಣನ್ ಚೀಮೇನಿ ಠಾಣೆ ಪೊಲೀಸರಿಗೆ ಹಾಗು ಸಂಬಂಧಿಕರಿಗೆ ಮಾಹಿತಿ ನೀಡಿದ ನಂತರ ಕೃತ್ಯ ಬೆಳಕಿಗೆ ಬಂದಿತು. ರಾತ್ರಿಯೇ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ತನಿಖೆಯನ್ನು ಕೇರಳ ಮಾತ್ರವಲ್ಲ ಹೊರರಾಜ್ಯಗಳಿಗೂ ವಿಸ್ತರಿಸಿ, ಮಹಾರಾಷ್ಟ್ರ ಕೇಂದ್ರೀಕರಿಸಿ ತನಿಖೆ ನಡೆಸಲಾಗಿತ್ತು.
ಕೃತ್ಯ ನಡೆದ ದಿನ ಹಣ್ಣು ಹಂಪಲು ಸಾಗಾಟ ಮಾಡಿದ ಮಹಾರಾಷ್ಟ್ರದ ಪಿಕಪ್ ವ್ಯಾನ್ ಬೆನ್ನತ್ತಿ ಪೊಲೀಸರು ತನಿಖೆ ನಡೆಸಿದ್ದರು. ಹೊರರಾಜ್ಯದವರೇ ಕೃತ್ಯ ನಡೆಸಿರುವ ಬಗ್ಗೆ ಸಂಶಯ ತಲೆದೋರಿತ್ತು. ಆದರೆ ಹಲವು ಮಜಲುಗಳ ಮೂಲಕ ತನಿಖೆ ನಡೆಸಿದರೂ ಯಾವುದೇ ಸುಳಿವು ಲಭಿಸಿರಲಿಲ್ಲ. ಪೊಲೀಸರಿಗೆ ಸವಾಲಾದ ಈ ಪ್ರಕರಣದ ಆರೋಪಿಗಳ ಬಂಧನ ವಿಳಂಬಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ, ಕ್ರಿಯಾಸಮಿತಿ ಹಾಗೂ ಇನ್ನಿತರ ಪಕ್ಷ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.