×
Ad

ನಳಿನ್ ನಂ.1 ಸಂಸದರಾದರೆ ಉಳಿದ ಸಂಸದರ ಪಾಡೇನು?

Update: 2018-02-22 18:43 IST

ಮಂಗಳೂರು, ಫೆ. 22: ದ.ಕ. ಜಿಲ್ಲೆಯ ಅಭಿವೃದ್ಧಿ ಪರ ಕಿಂಚಿತ್ತೂ ಕೆಲಸ ಮಾಡದ, ಚಿಂತಿಸದ ಸಂಸದ ನಳಿನ್ ಕುಮಾರ್ ಕಟೀಲ್ ನಂ.1 ಸಂಸದರಾದರೆ ದೇಶದ ಉಳಿದ 523 ಸಂಸದರ ಪಾಡೇನು? ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಸದ ನಳಿನ್ ಕುಮಾರ್ ಕಟೀಲ್‌ರ ಹೇಳಿಕೆಯ ಕುರಿತು ಪತ್ರಕರ್ತರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಬಿಜೆಪಿ ಯಾವತ್ತೂ ಹೇಳಿದ್ದನ್ನು ಮಾಡುವುದಿಲ್ಲ. ಹೇಳದೆ ಮಾಡಿ ಅದನ್ನು ಕಾಂಗ್ರೆಸ್ಸಿಗರ ತಲೆಗೆ ಕಟ್ಟುತ್ತಾರೆ. ಬೆಂಗರೆಯಲ್ಲಿ ಮೊನ್ನೆ ಗಲಭೆ ಸೃಷ್ಟಿಸಿದ್ದೇ ಬಿಜೆಪಿಗರು. ಎರಡನೆ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುವ ಅವರು ಇಂತಹ ವಿಚಾರಗಳಿಗೆ ಹೆಸರುವಾಸಿಯಾಗಿದ್ದಾರೆಯೇ ವಿನಃ ಅಭಿವೃದ್ಧಿ ಪರ ಯೋಚಿಸುತ್ತಿಲ್ಲ, ಕೆಲಸ ಮಾಡುತ್ತಿಲ್ಲ. ಸಂಸತ್‌ನಲ್ಲಿ ಮಾತನಾಡದ ಅವರು ನಂ.1 ಸಂಸದ ಎಂದು ಬಿಂಬಿಸಲ್ಪಡುತ್ತಿರುವುದು ವಿಪರ್ಯಾಸ ಎಂದರು.

ಅಡಿಕೆ ಕ್ಯಾನ್ಸರ್‌ಕಾರಕ ಎಂದು ಸರಕಾರವೇ ಸಂಸತ್‌ನಲ್ಲಿ ಹೇಳಿಕೆ ನೀಡಿದೆ. ಆದರೆ ಸಂಸದರು ಅದನ್ನು ಗಂಭೀರವಾಗಿ ಪರಿಗಣಿಸಬೇಡಿ ಎನ್ನುತ್ತಿದ್ದಾರೆ. ಅಡಕೆ ಬೆಳೆಗಾರರ ಪರ ಸರಕಾರ ಇದೆ ಎನ್ನುತ್ತಾರೆ. ಹಾಗಿದ್ದರೆ ಕೇಂದ್ರ ಸರಕಾರ ಸಂಸತ್‌ನಲ್ಲಿ ನೀಡಿದ ಹೇಳಿಕೆ ಸುಳ್ಳೇ? ಎಂದು ಪ್ರಶ್ನಿಸಿದ ಹರೀಶ್ ಕುಮಾರ್ ಈ ಬಗ್ಗೆ ಜಿಲ್ಲೆಯವರೇ ಆದ ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡದಿರುವುದು ವಿಪರ್ಯಾಸ ಎಂದರು.

ಸರಕಾರವನ್ನು ವಜಾ ಮಾಡಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭ್ರಷ್ಟ ಎಂದು ಬಿಜೆಪಿಗರು ಆರೋಪಿಸುತ್ತಿದ್ದಾರೆ. ಆದರೆ ಅದಕ್ಕೆ ಯಾವುದೇ ದಾಖಲೆ ಸಲ್ಲಿಸುತ್ತಿಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಸಂಸ್ಥೆಗಳು ಕೇಂದ್ರ ಸರಕಾರದ ಸುಪರ್ದಿಯಲ್ಲಿದೆ. ಬಿಜೆಪಿಗರಿಗೆ ತಾಕತ್ತಿದ್ದರೆ ತನಿಖೆ ನಡೆಸಲಿ, ಭ್ರಷ್ಟಾಚಾರದ ಆರೋಪ ಸಾಬೀತಾದರೆ ರಾಜ್ಯ ಸರಕಾರವನ್ನು ವಜಾ ಮಾಡಲಿ ಎಂದು ಹರೀಶ್ ಕುಮಾರ್ ಸವಾಲು ಹಾಕಿದರು.

ಎಬಿವಿಪಿ ಕಾರ್ಯಕರ್ತ: ಸುಳ್ಯದಲ್ಲಿ ವಿದ್ಯಾರ್ಥಿನಿ ಅಕ್ಷತಾಳನ್ನು ಹತ್ಯೆಗೈದ ಕಾರ್ತಿಕ್ ಎಬಿವಿಪಿ ಕಾರ್ಯಕರ್ತ. ಹಾಗಾಗಿ ಬಿಜೆಪಿಗರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಬಿಜೆಪಿ ಮುಖಂಡರಾದ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಮೌನ ವಹಿಸಿದ್ದು ಯಾಕೆ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಕವಿತಾ ಸನಿಲ್, ಕಾರ್ಪೊರೇಟರ್‌ಗಳಾದ ಪ್ರತಿಭಾ ಕುಳಾಯಿ, ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ಅಪ್ಪಿ, ಪ್ರಕಾಶ್ ಸಾಲ್ಯಾನ್, ಜೆಸಿಂತಾ ವಿಜಯಾ ಆಲ್ಫ್ರೆಡ್, ಪಕ್ಷದ ಮುಖಂಡರಾದ ಉಮರ್ ಫಾರೂಕ್ ಪುದು, ಪ್ರಶಾಂತ್ ಕಾಜವ ಮುಡಿಪು, ಅಬೂಬಕರ್ ಕುದ್ರೋಳಿ, ಖಾಲಿದ್ ಉಜಿರೆ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News