ಮಂಗಳೂರು: ರಾಜಕೀಯ ಗೂಂಡಾಗಳನ್ನು ಹತ್ತಿಕ್ಕಲು ಮುಸ್ಲಿಂ ವರ್ತಕರ ಸಂಘ ಕರೆ
ಮಂಗಳೂರು, ಫೆ.22: ದ.ಕ.ಜಿಲ್ಲೆಯ ಸ್ವಾಸ್ಥವನ್ನು ಮತೀಯ ಗೂಂಡಾಗಳು ಕೆಡಹುತ್ತಲೇ ಇದ್ದು, ಇದೀಗ ಚುನಾವಣೆ ಸಮೀಪಿಸುತ್ತಿರುವಾಗ ರಾಜಕೀಯ ಗೂಂಡಾಗಳು ಕೂಡ ತಲೆ ಎತ್ತುತ್ತಿವೆ. ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗದೆ ಕಾನೂನು ರೀತಿಯಲ್ಲಿ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸಬೇಕು. ಮತೀಯ ಗೂಂಡಾಗಳೊಂದಿಗೆ ರಾಜಕೀಯ ಗೂಂಡಾಗಳನ್ನೂ ಹತ್ತಿಕ್ಕಬೇಕು ಎಂದು ಮುಸ್ಲಿಂ ವರ್ತಕರ ಸಂಘದ ಮುಖಂಡರಾದ ಅಲಿ ಹಸನ್ ಮತ್ತು ಯಾಸೀನ್ ಕುದ್ರೋಳಿ ಒತ್ತಾಯಿಸಿದ್ದಾರೆ.
ಜಿಲ್ಲೆಯ ನಾನಾ ಕಡೆ ಅದರಲ್ಲೂ ಮಂಗಳೂರು ನಗರ ಮತ್ತು ಆಸುಪಾಸು ಇತ್ತೀಚಿನ ದಿನಗಳಲ್ಲಿ ಅಹಿತಕರ ಘಟನೆಗಳು ಜರಗುತ್ತಲೇ ಇದೆ. ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಹುಳಿಹಿಂಡುವ ಕೆಲಸ ಮಾಡಲಾಗುತ್ತದೆ. ಇದರಿಂದ ವ್ಯಾಪಾರ, ಸೌಹಾರ್ದಕ್ಕೆ ಹೊಡೆತ ಬೀಳುತ್ತಿವೆ. ಚುನಾವಣೆ ಸಮೀಪಿಸುವಾಗ ಇಂತಹ ಕೃತ್ಯಗಳು ಮತ್ತಷ್ಟು ವಿಜೃಂಭಿಸುವ ಅಪಾಯವಿದೆ. ಹಾಗಾಗಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಜರಗಿಸಬೇಕು. ಚುನಾವಣಾ ಆಯೋಗ ಕೂಡ ಮಧ್ಯಪ್ರವೇಶಿಸಿ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.