×
Ad

ಫೆ.24 : ಉಪ್ಪಿನಂಗಡಿಯಲ್ಲಿ ವಿಜಯ-ವಿಕ್ರಮ ಜೋಡುಕರೆ ಕಂಬಳ

Update: 2018-02-22 19:40 IST

ಪುತ್ತೂರು, ಫೆ. 22: ಉಪ್ಪಿನಂಗಡಿ ಕೂಟೇಲು ನೇತ್ರಾವತಿ ನದಿ ಕಿನಾರೆಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಜಾಗದಲ್ಲಿ 33ನೇ ವರ್ಷದ ಹೊನಲು ಬೆಳಕಿನ ವಿಜಯ ವಿಕ್ರಮ ಜೋಡುಕರೆ ಬಯಲು ಕಂಬಳವು ಫೆ. 24ರಂದು ನಡೆಯಲಿದೆ.

ಕಂಬಳ ಮಸೂದೆ ತಿದ್ದುಪಡಿ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ಮುದ್ರೆ ಬಿದ್ದ ಬಳಿಕ ಮೊದಲ ಬಾರಿಗೆ ನಡೆಯುವ ಈ ಕಂಬಳವನ್ನು ವಿಜಯೋತ್ಸವ ಕಂಬಳವಾಗಿ ಆಚರಿಸಲಾಗುವುದು ಎಂದು ಕಂಬಳ ಸಮಿತಿ ಅಧ್ಯಕ್ಷ ಅಶೋಕ್‌ಕುಮಾರ್ ರೈ ಕೋಡಿಂಬಾಡಿ ತಿಳಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಾಣಿ ದಯಾ ಸಂಘದವರಿಂದಾಗಿ ಕಂಬಳ ನಡೆಸಲು ತಡೆಯಾದ ಹಿನ್ನಲೆಯಲ್ಲಿ ಸರ್ಕಾರಕ್ಕೆ ಸರಿಯಾದ ಮಾಹಿತಿ ನೀಡಿ, ಹೈಕೋರ್ಟು ಮತ್ತು ಸುಪ್ರೀಂ ಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸಿ,ಸಮರ್ಥ ವಾದ ಮಂಡಿಸಲಾಗಿದ್ದು, ಹೈಕೋರ್ಟಿ ನಲ್ಲಿ ಅಂತಿಮ ಇತ್ಯರ್ಥ ಮಾ.24ರಂದು ನಡೆಯಲಿದೆ. ಅದಕ್ಕೆ ಮೊದಲೇ ಕಾನೂನು ತಿದ್ದುಪಡಿಯ ವಿಧೇಯಕಕ್ಕೆ ರಾಷ್ಟ್ರಪತಿಯವರ ಅಂಕಿತ ಬಿದ್ದಿದೆ. ಈ ಹಿನ್ನಲೆಯಲ್ಲಿ ವಿಜಯ ವಿಕ್ರಮ ಕಂಬಳವನ್ನು ವಿಜಯೋತ್ಸವ ಕಂಬಳವಾಗಿ ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆ ನಡೆದಿದೆ ಎಂದರು.

ಫೆ. 24ರಂದು ಬೆಳಗ್ಗೆ 8.55ಕ್ಕೆ ಉಪ್ಪಿನಂಗಡಿಯ ಸಹಸ್ತ್ರಲಿಂಗೇಶ್ವರ ದೇವಾಲಯದಿಂದ ಅತಿಥಿಗಳು, ಕಂಬಳಾಭಿಮಾನಿಗಳು ಕಂಬಳ ಕೋಣಗಳ ಜೊತೆ ಕಂಬಳ ಕೂಟಕ್ಕೆ ಮೆರವಣಿಗೆಯಲ್ಲಿ ಸಾಗಿ ಉದ್ಘಾಟನೆ ನಡೆಯಲಿದೆ. ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಉದ್ಘಾಟಿಸಲಿದ್ದಾರೆ.

ಉಪ್ಪಿನಂಗಡಿ ಸಹಸ್ತ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಘುನಾಥ ರೈ ಅಲಿಮಾರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್, ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಸಂಸದರಾದ ನಳಿನ್‌ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ, ಶಾಸಕಿ ಶಕುಂತಳಾ ಶೆಟ್ಟಿ, ಸಹಕಾರಿ ಮಹಾಮಂಡಲದ ರಾಜ್ಯಾಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆರು ವಿಭಾಗದಲ್ಲಿ ಕಂಬಳ ಸ್ಪರ್ಧೆಗಳು ನಡೆಯುವುದು. ಕನೆಹಲಗೆ,ನೇಗಿಲು ಹಿರಿಯ,ಅಡ್ಡಹಲಗೆ,ಹಗ್ಗ ಹಿರಿಯ ಮತ್ತು ಹಗ್ಗಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೋಣಗಳಿಗೆ ಒಂದು ಪವನ್ ಚಿನ್ನ ಹಾಗೂ ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ ಅರ್ಧ ಪವನ್ ಚಿನ್ನದ ಬಹುಮಾನ ನೀಡಲಾಗುವುದು. ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಕೋಣಗಳಿಗೆ ಅರ್ಧ ಪವನ್ ಚಿನ್ನ ಹಾಗೂ ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ 3ಗ್ರಾಂ ಚಿನ್ನದ ಬಹುಮಾನವಿದೆ ಎಂದ ಅವರು ಸ್ಪರ್ಧೆಯಲ್ಲಿ 150 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪೆ ಮತ್ತು ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News