×
Ad

ಬೈಂದೂರು: ಕರ್ಣಾಟಕ ಬ್ಯಾಂಕಿನ 795ನೆ ಶಾಖೆ ಉದ್ಘಾಟನೆ

Update: 2018-02-22 20:13 IST

ಬೈಂದೂರು, ಫೆ. 22: ಕರ್ಣಾಟಕ ಬ್ಯಾಂಕಿನ 795ನೆ ಶಾಖೆಯನ್ನು ಗುರುವಾರ ಬೆಳಗ್ಗೆ ಬೈಂದೂರಿನ ಪೆಟ್ರೋಲ್ ಬಂಕ್ ಸಮೀಪದ ದೀಪಾ ಕಾಂಪ್ಲೆಕ್ಸ್‌ನಲ್ಲಿ ಬ್ಯಾಂಕಿನ ಮಾಜಿ ನಿರ್ದೇಶಕ ಹಾಗೂ ಮಾಜಿ ಶಾಸಕ ಎ.ಜಿ. ಕೊಡ್ಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, 1924ರಲ್ಲಿ ಸ್ಥಾಪನೆಗೊಂಡ ಕರ್ಣಾಟಕ ಬ್ಯಾಂಕ್, ಖಾಸಗಿ ವಲಯದಲ್ಲಿ ದೇಶದಲ್ಲೇ ಅತ್ಯುತ್ತಮ ಸೇವೆ ನೀಡುವ ಬ್ಯಾಂಕ್ ಆಗಿ ಗುರುತಿಸಿಕೊಂಡಿದ್ದು, ಅತಿಶೀಘ್ರವೇ 800 ಶಾಖೆಗಳನ್ನು ತೆರೆಯುವ ಸಿದ್ಧತೆಯಲ್ಲಿದೆ. ತನ್ನ ಸಾಧನೆಯ ಮೂಲಕ ದೇಶದ ಖಾಸಗಿ ಬ್ಯಾಂಕ್‌ ಗಳಲ್ಲಿ ಅಗ್ರಗಣ್ಯ ಸ್ಥಾನವನ್ನು ಗಳಿಸಿರುವ ಕರ್ಣಾಟಕ ಬ್ಯಾಂಕ್, ಗ್ರಾಮೀಣ ಭಾಗದ ಜನತೆಗೆ ಅದರಲ್ಲೂ ಮುಖ್ಯವಾಗಿ ರೈತರಿಗೆ ಸೇವಾ ಸೌಲಭ್ಯ ಒದಗಿಸುವ ಮೂಲಕ ಸ್ಥಾಪಕರ ಆಶಯವನ್ನು ಈಡೇರಿಸುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ನ ಮಹಾ ಪ್ರಬಂಧಕ ವೈ.ವಿ.ಬಾಲಚಂದ್ರ ಮಾತನಾಡಿ, ಕರ್ಣಾಟಕ ಬ್ಯಾಂಕ್ ಕೇವಲ11,582 ರೂ. ಬಂಡವಾಳದೊಂದಿಗೆ ಸ್ಥಾಪನೆಗೊಂಡು ಈಗ 95ನೆ ವರ್ಷದಲ್ಲಿ 5,400 ಕೋ. ರೂ. ಬಂಡವಾಳ ಹೊಂದಿದೆ. ಉತ್ತಮ ಲಾಭಗಳಿಸುವ ಮೂಲಕ 1.68 ಲಕ್ಷ ಪಾಲುದಾರರಿಗೆ ಶೇ.40 ಡಿವಿಡೆಂಟ್ ನೀಡುತ್ತಿದೆ ಎಂದರು.

ಸದ್ಯ ದೇಶದ 22 ರಾಜ್ಯ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ವ್ಯವಹಾರವನ್ನು ನಡೆಸುತ್ತಿದ್ದು, ಆಧುನಿಕ ತಂತ್ರಜ್ಞಾನದ ವ್ಯಾಪಕ ಬಳಕೆಯ ಮೂಲಕವೂ ಗ್ರಾಹಕರಿಗೆ ಉತ್ಕೃಷ್ಠ ಸೇವೆ ನೀಡುತ್ತಿದೆ. ಎಲ್ಲ ವಿಧದ ಆರ್ಥಿಕ ಸೇವೆ ಒದಗಿಸುವ ಮೂಲಕ ಗರಿಷ್ಠ ಮಟ್ಟದಲ್ಲಿ ಗ್ರಾಹಕರ ವಿಶ್ವಾಸವನ್ನು ಸಂಪಾದಿಸಿದೆ ಎಂದರು.

ಬೈಂದೂರಿನ ನಿವೃತ್ತ ಐಎಫ್ಎಸ್ ಅಧಿಕಾರಿ ಬಿ.ಜಗನ್ನಾಥ ಶೆಟ್ಟಿ ಬ್ಯಾಂಕಿನ ಎಟಿಎಂ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎ.ಜಿ.ಕೊಡ್ಗಿ, ಕಟ್ಟಡದ ಮಾಲಕ ಜಗನ್ನಾಥ ಶೆಟ್ಟಿ ಹಾಗೂ ಪ್ರೇಮಾ ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು.

ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕಿ ವಿದ್ಯಾಲಕ್ಷ್ಮೀ ಆರ್. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬೈಂದೂರು ಶಾಖಾ ಪ್ರಬಂಧಕ ಪರಮೇಶ್ವರ ವಂದಿಸಿ, ಪ್ರಧಾನ ವ್ಯವಸ್ಥಾಪಕ ವಾದಿರಾಜ್ ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News