×
Ad

ಕುಂದಾಪುರ: ಫೆ.26, 27ರಂದು ರಾಜ್ಯಮಟ್ಟದ ಬುಡಕಟ್ಟು ಸಮ್ಮೇಳನ

Update: 2018-02-22 20:23 IST

ಕುಂದಾಪುರ, ಫೆ. 22: ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಪ್ಲಾಟಿನಂ ಜ್ಯುಬಿಲಿ ಹಾಗೂ ಮಾಹೆ ವಿ.ವಿ.ಯ ಬೆಳ್ಳಿಹಬ್ಬದ ಪ್ರಯುಕ್ತ ಸ್ಥಳೀಯ ಭಂಡಾರ್‌ಕಾರ್ಸ್‌ ಕಾಲೇಜಿನ ಆಶ್ರಯದಲ್ಲಿ ಕರಾವಳಿ ಕರ್ನಾಟಕದ ಬುಡಕಟ್ಟುಗಳು ಹಾಗೂ ವರ್ತಮಾನದ ಕುರಿತಂತೆ ರಾಜ್ಯಮಟ್ಟದ ಬುಡಕಟ್ಟು ಸಮ್ಮೇಳನ ಫೆ. 26 ಮತ್ತು 27ರಂದು ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ನಡೆಯಲಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್ ತಿಳಿಸಿದ್ದಾರೆ.

ಕಾಲೇಜಿನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಈ ವಿಶಿಷ್ಟ ಸಮ್ಮೇಳನದ ಅಧ್ಯಕ್ಷರಾಗಿ ಪದ್ಮಶ್ರೀ ಹಾಗೂ ನಾಡೋಜ ಪ್ರಶಸ್ತಿ ಪುರಸ್ಕೃತೆ ಉತ್ತರ ಕನ್ನಡದ ಸುಕ್ರಿ ಬೊಮ್ಮಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದವರು ತಿಳಿಸಿದರು.

ಫೆ.26ರ ಬೆಳಗ್ಗೆ 11 ಗಂಟೆಗೆ ಮಣಿಪಾಲ ವಿ.ವಿ.ಯ ಪ್ರೊ ಚಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್ ಸಮ್ಮೇಳನ ಹಾಗೂ ವಿಚಾರಸಂಕಿರಣವನ್ನು ಉದ್ಘಾಟಿ ಸಲಿದ್ದು, ಡಾ. ಶಾಂತರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ. ಉದ್ಘಾಟನೆಗೂ ಮುನ್ನ ಬೆಳಗ್ಗೆ 9:30ಕ್ಕೆ ಬುಡಕಟ್ಟು ಸಮ್ಮೇಳನದ ಮೆರವಣಿಗೆಗೆ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಹಾಗೂ ಶಾಸಕ ಗೋಪಾಲ ಪೂಜಾರಿ ಚಾಲನೆ ನೀಡಲಿದ್ದಾರೆ ಎಂದು ಕಾಲೇಜಿನ ಸಮಾಜಶಾಸ ವಿಭಾಗದ ಪ್ರಾಧ್ಯಾಪಕ ರಾಮಚಂದ್ರ ಮಾಹಿತಿ ನೀಡಿದರು.

ಜಾನಪದ ಮತ್ತು ಬುಡಕಟ್ಟು ಸಮುದಾಯಗಳ ಕುರಿತಂತೆ ಛಾಯಾಚಿತ್ರ ಪ್ರದರ್ಶನವೊಂದನ್ನು ಇಂಟಕ್‌ನ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಉದ್ಘಾಟಿಸಲಿದ್ದು, ಬುಡಕಟ್ಟುಗಳ ಅನನ್ಯತೆ, ಅಭಿವೃದ್ಧಿ, ಸವಾಲುಗಳು ಹಾಗೂ ಸಾಧ್ಯತೆಗಳ ಕುರಿತು ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಸಂಬಂಧ ಏರ್ಪಡಿಸುವ ಕಲಾ ಪ್ರದರ್ಶನವನ್ನು ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಉದ್ಘಾಟಿಸಲಿದ್ದಾರೆ.

ಆದಿವಾಸಿ ಪರಿಷತ್: ಮರುದಿನ ಫೆ.27ರ ಬೆಳಗ್ಗೆ 9:30ಕ್ಕೆ ಕರಾವಳಿ ಕರ್ನಾಟಕದ ಬುಡಕಟ್ಟುಗಳು ಹಾಗೂ ವರ್ತಮಾನ ಕುರಿತು ಪ್ರಬಂಧ ಮಂಡನೆ ಯಾಗಲಿದೆ. ಬೆಳಗ್ಗೆ 11:30ರಿಂದ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸಮನ್ವಯಕಾರರಾಗಿರುವ ಆದಿವಾಸಿ ಪರಿಷತ್ ನಡೆಯಲಿದೆ. ಇದರಲ್ಲಿ ಅಧಿಕಾರಿ ವರ್ಗ ಪಾಲ್ಗೊಳ್ಳಲಿದ್ದು, ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. ಅಪರಾಹ್ನ 2:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಂಗಳೂರು ವಿವಿಯ ಸಮಾಜಶಾಸ ವಿಭಾಗದ ಮುಖ್ಯಸ್ಥ ಡಾ.ವಿನಯ್‌ರಾಜ್ ಸಮಾರೋಪ ಭಾಷಣ ಮಾಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪದವಿಯ ಡಾ ಎನ್. ಪಿ. ನಾರಾಯಣ ಶೆಟ್ಟಿ, ಪ.ಪೂ. ಕಾಲೇಜಿನ ಡಾ ಜಿ.ಎ. ಗೊಂಡ, ಕಾರ್ಯಕ್ರಮ ಸಂಚಾಲಕ ಡಾ ಶುಭಕರಾಚಾರಿ, ಇತಿಹಾಸ ವಿಭಾಗ ಮುಖ್ಯಸ್ಥ ಗೋಪಾಲ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News