×
Ad

ಪಜೀರ್ ಗೋವನಿತಾಶ್ರಯಕ್ಕೆ ಪೊಲೀಸ್ ದಾಳಿ: ಮೂವರು ವಶಕ್ಕೆ; ಇಬ್ಬರು ಪರಾರಿ

Update: 2018-02-22 21:57 IST
ಫೆ. 20ರಂದು ತಂಡದಿಂದ ಹಲ್ಲೆಗೊಳಗಾದವರು

ಮಂಗಳೂರು, ಫೆ.22: ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರ್ ಗ್ರಾಮದ ಬೀಜಗುರಿ ಎಂಬಲ್ಲಿರುವ ಗೋವನಿತಾಶ್ರಯಕ್ಕೆ ಕೇರಳ ಮತ್ತು ಕೊಣಾಜೆ ಪೊಲೀಸರು ದಾಳಿ ನಡೆಸಿ ಹೊಸಂಗಡಿ ಜಂಕ್ಷನ್‌ನಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣದ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಹೊಸಂಗಡಿ ಜಂಕ್ಷನ್‌ನಲ್ಲಿ ಮಂಗಳವಾರ ನಡೆದ ತಲವಾರು ದಾಳಿ ಪ್ರಕರಣದ ಆರೋಪಿಗಳು ಕೊಣಾಜೆ-ಪಜೀರಿನಲ್ಲಿರುವ ಬಗ್ಗೆ ಮಾಹಿತಿ ಪಡೆದ ಕೇರಳ ಪೊಲೀಸರು ಗುರುವಾರ ಗೋವನಿತಾಶ್ರಯಕ್ಕೆ ದಾಳಿ ನಡೆಸಿದರು.

ಈ ಸಂದರ್ಭ ಅಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾದ ಐವರು ಆರೋಪಿಗಳು ಪರಾರಿಯಾಗಲು ಯತ್ನಿಸಿದರು. ಆದರೆ, ಸ್ಥಳೀಯ ಯುವಕರ ನೆರವಿನಿಂದ ಮೂವರನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾದರು. ಉಳಿದ ಇಬ್ಬರು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ವಿವರ

ಮೊಬೈಲ್ ಟವರ್ ಆಧಾರದ ಮೇಲೆ ಆರೋಪಿಗಳು ಪಜೀರ್-ಪಾವೂರು ಬಳಿ ಇರುವ ಬಗ್ಗೆ ಖಚಿತಪಡಿಸಿಕೊಂಡ ಕೇರಳ ಪೊಲೀಸರು ಪಾವೂರು ಮಲಾರ್‌ನಲ್ಲಿ ಕಾರ್ಯಾಚರಣೆ ಆರಂಭಿಸಿದರು. ವಿಷಯ ತಿಳಿದ ಸ್ಥಳೀಯ ಯುವಕರು ಕೂಡ ಪೊಲೀಸರಿಗೆ ನೆರವು ನೀಡಿದರು. ಅದರಂತೆ ಮಧ್ಯಾಹ್ನ ಸುಮಾರು 2:15ರ ವೇಳೆಗೆ ಗೋವನಿತಾಶ್ರಯಕ್ಕೆ ದಾಳಿ ಮಾಡಿದಾಗ ಆರೋಪಿಗಳು ಅಲ್ಲಿಂದ ಓಡಿ ಹೋಗಲು ಯತ್ನಿಸಿದರು ಎನ್ನಲಾಗಿದೆ. ತಕ್ಷಣ ಪೊಲೀಸರು ಮತ್ತು ಸ್ಥಳೀಯ ಯುವಕರು ಬೆನ್ನಟ್ಟಿ ಮೂವರನ್ನು ವಶಕ್ಕೆ ಪಡೆದುಕೊಂಡರು ಎನ್ನಲಾಗಿದೆ.

ಕಾರ್ಯಾಚರಣೆಯ ಬಗ್ಗೆ ಮಂಗಳೂರು ನಗರ ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಖಚಿತಪಡಿಸಿದ್ದಾರೆ. ಆದರೆ ಯಾವ ಪ್ರಕರಣದ ಆರೋಪಿಗಳು ಎಂಬುದು ಖಚಿತ ಪಡಿಸಿಲ್ಲ. 

ಕೊಲೆ ಯತ್ನ ಪ್ರಕರಣ ಆರೋಪಿಗಳು

ಗೋವನಿತಾಶ್ರಯದಲ್ಲಿ ಆಶ್ರಯ ಪಡೆದಿದ್ದ ಆರೋಪಿಗಳು ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಗೋವನಿತಾಶ್ರಯಕ್ಕೆ ದಾಳಿ ನಡೆಸಿಲ್ಲ. ಆರೋಪಿಗಳನ್ನು ಬಂಧಿಸಲು ಹೋಗಿದ್ದಾಗ ಓಡಿ ಹೋಗುತ್ತಿದ್ದ ಸಂದರ್ಭದಲ್ಲಿ ಮೂವರನ್ನು ಸೆರೆ ಹಿಡಿದಿದ್ದೇವೆ ಎಂದು ಮಂಜೇಶ್ವರ ಪೊಲೀಸ್ ಠಾಣಾ ಎಸ್‌ಐ ಅನೂಪ್ ಕುಮಾರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಗೋವನಿತಾಶ್ರಯ ವಿರುದ್ಧ ಕ್ರಮಕ್ಕೆ ಸ್ಥಳೀಯರ ಒತ್ತಾಯ

ಕೇರಳ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಕೊಲೆ ಯತ್ನ ಆರೋಪಿಗಳಿಗೆ ಆಶ್ರಯ ನೀಡಿದ್ದ ಬೀಜಗುರಿ ಗೋವನಿತಾಶ್ರಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೊಲೆ ಯತ್ನದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ಪೊಲೀಸರಿಗೆ ಸಹಕಾರ ನೀಡಬೇಕಾಗಿದ್ದ ಗೋವನಿತಾಶ್ರಯದವರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿರುವುದು ಖಂಡನೀಯ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ನೀಡಿ ಗೋವನಿತಾಶ್ರಯದ ವಿರುದ್ಧ ಕ್ರಮ ಜರಗಿಸುವಂತೆ ಒತ್ತಾಯಿಸಲಾಗುವುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ವೀಡಿಯೊ ಸೆರೆ ಹಿಡಿದವರ ಮೊಬೈಲ್‌ನ್ನು ಕಸಿದುಕೊಂಡರು !

ಮೊಬೈಲ್ ಟವರ್ ಆಧಾರದಲ್ಲಿ ಆರೋಪಿಗಳನ್ನುಸೆರೆ ಹಿಡಿಯಲು ಬಂದಿದ್ದ ಕೇರಳ ಪೊಲೀಸರು ಸ್ಥಳೀಯರ ನೆರವನ್ನು ಯಾಚಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಅವರನ್ನು ಗೋವನಿತಾಶ್ರಯಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಗೋವನಿತಾಶ್ರಯದ ಮುಂದಿನ ಗೇಟ್ ತೆರೆದಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಕೆಲವು ಯುವಕರು ಕಾರ್ಯಾಚರಣೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದರು. ತದನಂತರ ಪೊಲೀಸರು ವೀಡಿಯೊ ದೃಶ್ಯಾವಳಿಯನ್ನು ಸೆರೆ ಹಿಡಿದಿದ್ದ ಯುವಕರ ಮೊಬೈಲ್‌ನ್ನು ಕಸಿದುಕೊಂಡು ವೀಡಿಯೊ ದೃಶ್ಯಾವಳಿಗಳನ್ನು ಡಿಲಿಟ್ ಮಾಡಿಸಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಘಟನೆಯ ಹಿನ್ನೆಲೆ

ಫೆ. 20ರಂದು ರಾತ್ರಿ ಸುಮಾರು 10 ಗಂಟೆಗೆ ತಂಡವೊಂದು ಹೊಸಂಗಡಿಯ ಜಂಕ್ಷನ್‌ನಲ್ಲಿ ಮೂವರ ಮೇಲೆ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿತ್ತು. ಘಟನೆಯಲ್ಲಿ ಹೊಸಂಗಡಿ ನಿವಾಸಿ ನಝೀರ್ (37), ಪೋಸೋಟ್ ನಿವಾಸಿ ಆತಿಫ್ (20) ಮತ್ತು ಮಂಜೇಶ್ವರ ಗಾಂಧಿನಗರ ನಿವಾಸಿ ಮುಹಮ್ಮದ್ ಅಶ್ರಫ್ (33) ಎಂಬವರು ಗಂಭೀರ ಗಾಯಗೊಂಡಿದ್ದರು.

ಗಾಯಾಳುಗಳನ್ನು ಉಪ್ಪಳದ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆ ತರಲಾಗಿತ್ತು. ನಝೀರ್ ಅವರು ಹೊಸಂಗಡಿ ಜಂಕ್ಷನ್‌ನಲ್ಲಿ ಜ್ಯೂಸ್ ಅಂಗಡಿ ಹೊಂದಿದ್ದು, ಅಲ್ಲಿ ಆತಿಫ್ ಕೆಲಸ ಮಾಡುತ್ತಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಅಂಗಡಿ ಬಂದ್ ಮಾಡುವ ಸಂದರ್ಭ 5 ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ ತಂಡ ಅವರ ಮೇಲೆ ತಲವಾರು ದಾಳಿ ನಡೆಸಿತ್ತು. ಈ ಸಂದರ್ಭ ಅಂಗಡಿಗೆ ಜ್ಯೂಸ್ ಕುಡಿಯಲೆಂದು ಬಂದಿದ್ದ ಮುಹಮ್ಮದ್ ಅಶ್ರಫ್ ಅವರ ಮೇಲೂ ಗುಂಪು ತಲವಾರು ದಾಳಿ ನಡೆಸಿತ್ತು.

ಘಟನೆಯಲ್ಲಿ ಆರೋಪಿಗಳು ಆತಿಫ್‌ರ ಕುತ್ತಿಗೆಗೆ ತಲವಾರು ಬೀಸಿದ್ದ ಸಂದರ್ಭ ಆಸಿಫ್ ಕೈಯೊಡ್ಡಿದ ಪರಿಣಾಮ ಅವರ ಕೈಗೆ ಬಲವಾದ ಏಟು ತಗುಲಿತ್ತು. ನಝೀರ್ ಅವರ ಕುತ್ತಿಗೆಗೆ ಹಾಗೂ ಅಶ್ರಫ್ ಅವರ ತಲೆಗೆ ಗಾಯವಾಗಿದ್ದವು. ದಾಳಿ ನಡೆಸಿದವರು ಗಾಂಜಾ ವ್ಯಸನಿಗಳು ಮತ್ತು ಗಾಂಜಾ ವ್ಯವಹಾರದಲ್ಲಿ ತೊಡಗಿದ್ದರೆಂದು ಆರೋಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News