ಜನರಲ್ ರಾವತ್‌ಗೆ ತಪ್ಪು ಮಾಹಿತಿ ನೀಡಲಾಗಿದೆ: ಎಐಯುಡಿಎಫ್ ಮುಖ್ಯಸ್ಥ

Update: 2018-02-22 16:31 GMT

ಹೊಸದಿಲ್ಲಿ, ಫೆ.22: ಅಸ್ಸಾಂನಲ್ಲಿ ಮುಸ್ಲಿಂ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಎಐಯುಡಿಎಫ್ ಪಕ್ಷವು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ ಎಂಬ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್, ರಾವತ್‌ಗೆ ಬಗ್ಗೆ ನಮಗೆ ಗೌರವವಿದೆ. ಆದರೆ ಅವರಿಗೆ ತಪ್ಪು ಮಾಹಿತಿಯನ್ನು ನೀಡಲಾಗಿದೆ ಎಂದು ತಿಳಿಸಿರುವುದಾಗಿ ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

ನಮ್ಮ ಪಕ್ಷವು ಎಲ್ಲ ಚುನಾವಣೆಗಳಲ್ಲಿ ಹಿಂದೂ ಸಹೋದರರಿಗೂ 20-25 ಸ್ಥಾನಗಳನ್ನು ನೀಡಿದೆ. ಅಸ್ಸಾಂನಲ್ಲಿ ಭೌಗೋಳಿಕ ಬದಲಾವಣೆಗಳು ನಡೆಯುತ್ತಿದೆ ಎಂದಾದರೆ ಅದನ್ನು ತಡೆಯುವುದು ಸರಕಾರದ ಕೆಲಸ. ನಮ್ಮ ಗಡಿಯೊಳಗೆ ನುಸುಳುವ ಯಾರೇ ಆದರೂ ಅವರನ್ನು ಗುಂಡಿಟ್ಟು ಸಾಯಿಸಿ ಎಂದು ಹೇಳಿರುವ ಏಕೈಕ ಪಕ್ಷ ನಮ್ಮದು ಎಂದು ಅಜ್ಮಲ್ ತಿಳಿಸಿದ್ದಾರೆ. ನಾವು ಕೂಡಾ ಭಾರತೀಯರು ಎಂಬ ಘನತೆಯೊಂದಿಗೆ ಬದುಕಲು ಅವಕಾಶ ನೀಡಿ ಎಂದು ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ರಾಷ್ಟ್ರಪತಿ, ಪ್ರಧಾನಿ ಹಾಗೂ ಗೃಹ ಸಚಿವರ ಜೊತೆ ಸಮಾಲೋಚನೆ ನಡೆಸಲು ಸಮಯವನ್ನು ಕೋರಿರುವುದಾಗಿ ಅವರು ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಜನರಲ್ ರಾವತ್, ಅಸ್ಸಾಂನಲ್ಲಿ ಪಾಕಿಸ್ತಾನದ ಕುಮ್ಮಕ್ಕಿನಿಂದ ಬಾಂಗ್ಲಾ ನುಸುಳುಕೋರರ ಹಾವಳಿ ಹೆಚ್ಚಾಗುತ್ತಿದೆ ಎಂದು ಹೇಳಿದ್ದರು. ಜೊತೆಗೆ ಎಐಯುಡಿಎಫ್ ಪಕ್ಷದತ್ತ ಬೆಟ್ಟು ಮಾಡಿ, ಆ ಪಕ್ಷವು ಬಿಜೆಪಿಗಿಂತಲೂ ಹೆಚ್ಚಿನ ವೇಗದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News