ತಮ್ಮ ಗ್ರಾಮದಲ್ಲಿ ತ್ಯಾಜ್ಯ ಸುರಿದ ಗುತ್ತಿಗೆದಾರನಿಗೆ ದಂಡ ವಿಧಿಸಿ, ವಾಹನವನ್ನು ಠಾಣೆಗೆ ಒಪ್ಪಿಸಿದ ಪಂಚಾಯತ್

Update: 2018-02-22 17:37 GMT

ಮಂಗಳೂರು, ಫೆ.22: ಕಲ್ಲೋಡಿ ರಸ್ತೆಯ ಬದಿಯಲ್ಲಿ ಕಸವನ್ನು ಸುರಿದ ಆರೋಪದಲ್ಲಿ ಮಳವೂರು ಗ್ರಾಮ ಪಂಚಾಯತ್ ಅಧಿಕಾರಿಗಳು ತ್ಯಾಜ್ಯ ವಿಲೇವಾರಿಯ ಗುತ್ತಿಗೆದಾರನಿಗೆ ದಂಡ ವಿಧಿಸಿ, ತ್ಯಾಜ್ಯ ವಿಲೇವಾರಿಯ ವಾಹನವನ್ನು ಬಜ್ಪೆ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ನಡೆದಿದೆ.

ಫೆ. 2ರಂದು ಮಳವೂರು ಗ್ರಾ.ಪಂ. ವ್ಯಾಪ್ತಿಯ ಕಲ್ಲೋಡಿ ರಸ್ತೆಯ ಬದಿಯಲ್ಲಿ ತ್ಯಾಜ್ಯವನ್ನು ಸುರಿಯಲಾಗಿತ್ತು. ಕೊಳಂಬೆ ಗ್ರಾಮದ ಸುಂಕದಕಟ್ಟೆಯಲ್ಲಿ ವಾಸವಾಗಿರುವ ಅಶೋಕ್ ಫ್ರಾನ್ಸಿಸ್ ಡಿಕುನ್ಹ ಬಿನ್ ಮ್ಯಾಕ್ಸಿಂ ಡಿ ಕುನ್ಹ (40) ಬಜ್ಪೆ ಗ್ರಾ.ಪಂ. ತ್ಯಾಜ್ಯ ವಿಲೇವಾರಿಯ ಗುತ್ತಿಗೆಯನ್ನು ಪಡೆದಿದ್ದರು.

ತ್ಯಾಜ್ಯ ವಿಲೇವಾರಿ ಘಟಕಕ್ಕೆ ತ್ಯಾಜ್ಯವನ್ನು ಸಾಗಿಸುವ ಸಂದರ್ಭದಲ್ಲಿ ತ್ಯಾಜ್ಯವನ್ನು ಕಲ್ಲೋಡಿ ರಸ್ತೆ ಬದಿಯಲ್ಲಿ ಸುರಿದಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಮಳವೂರು ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಬಜ್ಪೆ ಠಾಣೆ ಪೊಲೀಸ್ ಉಪ ನಿರೀಕ್ಷಕರಿಗೆ ದೂರು ನೀಡಿ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದರಂತೆ ಬಜ್ಪೆ ಪೊಲೀಸರು ಕಾರ್ಯಾಚರಣೆ ನಡೆಸಿ ತ್ಯಾಜ್ಯ ವಿಲೇವಾರಿಯ ವಾಹನವನ್ನು ವಶಕ್ಕೆ ಪಡೆದಿದ್ದರು.

ಆರೋಪಿಯಿಂದ ಮುಚ್ಚಳಿಕೆ

ಆರೋಪಿ ಮ್ಯಾಕ್ಸಿಂ ಡಿ.ಕುನ್ಹ ಅವರು ರಸ್ತೆ ಬದಿ ತ್ಯಾಜ್ಯವನ್ನು ಸುರಿದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಈ ಬಗ್ಗೆ ಮುಚ್ಚಳಿಕೆ ಬರೆದಿರುವ ಅವರು ಇಂತಹ ತಪ್ಪನ್ನು ಇನ್ನು ಮುಂದೆ ಮಾಡುವುದಿಲ್ಲ. ಮುರನಗರದಿಂದ ಮಾರ್ನಿಂಗ್ ಸ್ಟಾರ್ ಶಾಲೆಯ ಜಂಕ್ಷನ್‌ವರೆಗೆ ಹಾಗೂ ಪೊರ್ಕೋಡಿ ಜಂಕ್ಷನ್‌ನಿಂದ ಅಂತೋನಿಕಟ್ಟೆ ಬಸ್ ತಂಗುದಾಣದ ವರೆಗೆ ರಸ್ತೆಯ ಎರಡೂ ಬದಿಯ ಎಲ್ಲಾ ತ್ಯಾಜ್ಯಗಳನ್ನು ವಿಲೇಗೊಳಿಸಲು ಕ್ರಮ ಕೈಗೊಳ್ಳುತ್ತೇನೆ. ಅಲ್ಲದೆ, ವಿಧಿಸಿರುವ ದಂಡವನ್ನು ಪಾವತಿ ಮಾಡುತ್ತೇನೆಂದು  ಮುಚ್ಚಳಿಕೆ ಪತ್ರದಲ್ಲಿ ತಿಳಿಸಿದ್ದಾರೆ.

ಅದರಂತೆ ಆರೋಪಿ ಗುತ್ತಿಗೆದಾರನಿಂದ ದಂಡವನ್ನು ಪಡೆದು ವಾಹನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಮಳವೂರು ಗ್ರಾ.ಪಂ.ನ ಪ್ರಕಟನೆ ತಿಳಿಸಿದೆ.

Writer - ಫೋಟೊ: ರಮೇಶ್ ಪೆರ್ಲ

contributor

Editor - ಫೋಟೊ: ರಮೇಶ್ ಪೆರ್ಲ

contributor

Similar News