1 ಲಕ್ಷ ರೊಹಿಂಗ್ಯಾರಿಗೆ ಬಂಗಾಳ ಕೊಲ್ಲಿ ದ್ವೀಪದಲ್ಲಿ ನೆಲೆ

Update: 2018-02-22 17:14 GMT

ಢಾಕಾ (ಬಾಂಗ್ಲಾದೇಶ), ಫೆ. 22: ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ರೊಹಿಂಗ್ಯಾ ಮುಸ್ಲಿಮರ ಪೈಕಿ ಸುಮಾರು 1 ಲಕ್ಷ ಮಂದಿಗೆ ಆಶ್ರಯ ಕಲ್ಪಿಸುವುದಕ್ಕಾಗಿ ಬಂಗಾಳ ಕೊಲ್ಲಿಯ ಜನವಸತಿರಹಿತ ದ್ವೀಪ ‘ಭಸನ್ ಚಾರ್’ನ್ನು ವಾಸಯೋಗ್ಯವನ್ನಾಗಿ ಮಾಡಲಾಗುತ್ತಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಮ್ಯಾನ್ಮಾರ್‌ನಲ್ಲಿ ಹಿಂಸೆ ಸ್ಫೋಟಗೊಂಡ ಬಳಿಕ ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಬಾಂಗ್ಲಾದೇಶಕ್ಕೆ ಪಲಾಯನಗೈದಿರುವ ಸುಮಾರು 7 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಕಾಕ್ಸ್‌ಬಝಾರ್‌ನಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

 ಅಲ್ಲಿನ ಶಿಬಿರಗಳ ಮೇಲಿನ ಒತ್ತಡವನ್ನು ತಗ್ಗಿಸುವುದಕ್ಕಾಗಿ ‘ತಾತ್ಕಾಲಿಕ ನೆಲೆಯಲ್ಲಿ’ ಸುಮಾರು 1 ಲಕ್ಷ ನಿರಾಶ್ರಿತರನ್ನು ಈ ದ್ವೀಪದಲ್ಲಿ ಇರಿಸಲಾಗುವುದು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಸೋಮವಾರ ಹೇಳಿದ್ದಾರೆ.

ಆದರೆ, ಒಮ್ಮೆ ದ್ವೀಪಕ್ಕೆ ಹೋದ ಬಳಿಕ, ಅವರು ಮ್ಯಾನ್ಮಾರ್‌ಗೆ ವಾಪಸ್ ಹೋಗುವುದಾದರೆ ಅಥವಾ ಅವರಿಗೆ ಆಶ್ರಯ ನೀಡಲು ಮೂರನೆ ದೇಶವೊಂದು ಮುಂದೆ ಬಂದರೆ ಮಾತ್ರ ಅವರು ದ್ವೀಪದಿಂದ ಹೊರಗೆ ಬರಬಹುದು ಎಂಬುದಾಗಿ ಹಸೀನಾರ ಸಲಹೆಗಾರರೊಬ್ಬರು ‘ರಾಯ್ಟರ್ಸ್’ಗೆ ಹೇಳಿದ್ದಾರೆ.

 ‘‘ಅದು ಯಾತನಾ ಶಿಬಿರ (ಕಾನ್ಸಂಟ್ರೇಶನ್ ಕ್ಯಾಂಪ್)ಗಳಲ್ಲ. ಆದರೆ, ಕೆಲವೊಂದು ನಿರ್ಬಂಧಗಳಿರಬಹುದು. ನಾವು ಅವರಿಗೆ ಬಾಂಗ್ಲಾದೇಶಿ ಪಾಸ್‌ಪೋರ್ಟ್ ಅಥವಾ ಗುರುತು ಚೀಟಿಗಳನ್ನು ನೀಡುವುದಿಲ್ಲ’’ ಎಂದು ಸಲಹೆಗಾರ ಎಚ್.ಟಿ. ಇಮಾಮ್ ನುಡಿದರು.

ದ್ವೀಪದಲ್ಲಿ ಪೊಲೀಸ್ ಠಾಣೆಯೊಂದನ್ನು ನಿರ್ಮಿಸಲಾಗುತ್ತದೆ ಹಾಗೂ ಅಲ್ಲಿ 40-50 ಸಶಸ್ತ್ರ ಪೊಲೀಸರು ಇರುತ್ತಾರೆ ಎಂದು ತಿಳಿಸಿದರು.

ಭರದಿಂದ ನಡೆಯುತ್ತಿದೆ ಕಾಮಗಾರಿ

ಮುಂಗಾರು ಮಳೆ ಆರಂಭಕ್ಕೆ ಮುನ್ನ ನಿರಾಶ್ರಿತರನ್ನು ದ್ವೀಪಕ್ಕೆ ಕರೆತರಲು ಸಾಧ್ಯವಾಗುವಂತೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಬ್ರಿಟಿಶ್ ಮತ್ತು ಚೀನೀ ಇಂಜಿನಿಯರ್‌ಗಳು ದ್ವೀಪವನ್ನು ವಾಸಯೋಗ್ಯ ಮಾಡಲು ನೆರವು ನೀಡುತ್ತಿದ್ದಾರೆ.

ಒಂದು ವರ್ಷದ ಹಿಂದೆ ಅಲ್ಲಿ ರಸ್ತೆಗಳು, ಕಟ್ಟಡಗಳು, ಜನರಿರಲಿಲ್ಲ.

ಫೆಬ್ರವರಿ 14ರಂದು ‘ರಾಯ್ಟರ್ಸ್’ ಮತ್ತೆ ಭೇಟಿ ನೀಡಿದಾಗ ನೂರಾರು ಕಾರ್ಮಿಕರು ಹಡಗುಗಳಿಂದ ಇಟ್ಟಿಗೆಗಳು ಮತ್ತು ಮರಳನ್ನು ಸಾಗಿಸುತ್ತಿದ್ದರು. ಅಲ್ಲಿ ಈಗ ರಸ್ತೆಗಳು ಮತ್ತು ಹೆಲಿಪ್ಯಾಡ್ ನಿರ್ಮಾಣಗೊಂಡಿವೆ.

ಪದೇ ಪದೇ ಪ್ರವಾಹ ಕಾಡುವ ದ್ವೀಪ

ಈ ತೇಲುವ ದ್ವೀಪವು 20 ವರ್ಷಗಳ ಹಿಂದೆಯಷ್ಟೇ ಹೂಳಿನಿಂದಾಗಿ ಸೃಷ್ಟಿಯಾಗಿದೆ. ಅದು ಬಾಂಗ್ಲಾದೇಶದ ಪ್ರಧಾನ ನೆಲದಿಂದ ಸುಮಾರು 30 ಕಿ.ಮೀ. ದೂರವಿದೆ.

 ಅಲ್ಲಿ ಜೂನ್-ಸೆಪ್ಟಂಬರ್ ಅವಧಿಯಲ್ಲಿ ಪದೇ ಪದೇ ಪ್ರವಾಹ ಸಂಭವಿಸುತ್ತದೆ. ಸಮೀಪದ ಜಲಪ್ರದೇಶದಲ್ಲಿ ಹಣಕ್ಕಾಗಿ ಮೀನುಗಾರರನ್ನು ಅಪಹರಿಸಲು ಕಡಲ್ಗಳ್ಳರು ಸುತ್ತುತ್ತಿರುತ್ತಾರೆ ಎಂದು ಸಮೀಪದ ದ್ವೀಪಗಳ ನಿವಾಸಿಗಳು ಹೇಳುತ್ತಾರೆ.

ಈ ಹೂಳು ದ್ವೀಪವು ಪದೇ ಪದೇ ಚಂಡಮಾರುತಕ್ಕೆ ಗುರಿಯಾಗುತ್ತದೆ ಹಾಗೂ ಸಾವಿರಾರು ಜನರ ಬದುಕಿಗೆ ಇದು ಬೆಂಬಲ ನೀಡದು ಎಂದು ನೆರವು ಕಾರ್ಯಕರ್ತರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News