ಬೆಳ್ತಂಗಡಿ: ಮಹಿಳೆ ಆತ್ಮಹತ್ಯೆ; ಮರಣೋತ್ತರ ಪರೀಕ್ಷೆ ಮಾಡಲು ನಿರಾಕರಿಸಿದ ವೈದ್ಯಧಿಕಾರಿಗಳು; ಆರೋಪ

Update: 2018-02-22 17:30 GMT

ಬೆಳ್ತಂಗಡಿ, ಫೆ. 22: ಇಲ್ಲಿಗೆ ಸಮೀಪ ಲಾಯಿಲದಲ್ಲಿ ಬುಧವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಇಂದು ಸಂಜೆಯವರೆಗೂ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಮಾಡಲು ವೈಧ್ಯರು ನಿರಾಕರಿಸಿದ ಹಿನ್ನೆಲೆಯಲ್ಲಿ 24 ಗಂಟೆಯ ಬಳಿಕ ಗುರುವಾರ ಸಂಜೆಯ ವೇಳೆಗೆ ಪೋಲೀಸರು ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರಗೆ ಸಾಗಿಸಿದ್ದಾರೆ.

ಲಾಯಿಲದಲ್ಲಿ ಕಲ್ಲಿನ ಕೆಲಸಕ್ಕೆಂದು ಗದಗದಿಂದ ಬಂದಿದ್ದ ಕುಟುಂಬವೊಂದು ಕಳೆದ ಒಂದು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಸಂಜೆಯ ವೇಳೆ ಕುಟುಂಬದಲ್ಲಿ ಯಾವುದೋ ಜಗಳ ನಡೆದು ಜಯಶ್ರೀ (31) ತಮ್ಮ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರು. ರಾತ್ರಿ ಎಂಟು ಗಂಟೆಯ ಸುಮಾರಿಗೆ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತಂದಿದ್ದರು. ಆ ವೇಳೆಗೆ ಅಲ್ಲಿದ್ದ ವೈದ್ಯರು ಹೊರನೋಟಕ್ಕೆ ಅನುಮಾನವಿದೆ ತಹಶೀಲ್ದಾರರು ಬಂದು ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ಇಂದು ಅಪರಾಹ್ನ ತಹಶೀಲ್ದಾರರು ಬಂದು ಪರಿಶೀಲನೆ ನಡೆಸಿ ಮನೆಯವರೆಲ್ಲರಿಂದ ಮಾಹಿತಿ ಪಡೆದು ಯಾವುದೇ ಅನುಮಾನವಿಲ್ಲ ಎಂದ ಹಿನ್ನೆಲೆಯಲ್ಲಿ ಇಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಸೂಚಿಸಿದರು. ಅದಾದ ಬಳಿಕ ಮನೆಯವರು ಹಾಗೂ ಪೊಲೀಸರು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರಾದ ಗೌತಮ್ ಶೆಟ್ಟಿಗಾರ್ ಅವರಲ್ಲಿ ತೆರಳಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೇಳಿಕೊಂಡಿದ್ದಾರೆ, ಆದರೆ ಅವರು ಅದಕ್ಕೆ ನಿರಾಕರಿಸಿ, ಮರಣೋತ್ತರ ಪರೀಕ್ಷೆ ನಡೆಸಬೇಕಾದರೆ ಮಹಿಳಾ ವೈದ್ಯರು ಇರಬೇಕು ಇಲ್ಲದಿದ್ದರೆ ತಾನು ನಡೆಸುವುದಿಲ್ಲ ಎಂದು ಹಟ ಹಿಡಿದಿದ್ದಾರೆ. ತಾವು ಅದಕ್ಕೆ ಯಾವುದೇ ವ್ಯವಸ್ಥೆ ಮಾಡದೆ ನೀವೇ ಮಹಿಳಾ ವೈದ್ಯರನ್ನು ಕರೆ ತನ್ನಿ ಎಂದಿದ್ದು, ಕೂಲಿ ಕಾರ್ಮಿಕರಾದ ಮನೆಯವರು ಈಗಾಗಲೆ ಆಕೆ ಮೃತ ಪಟ್ಟು ಒಂದು ದಿನ ಕಳೆದಿದೆ ದಯಮಾಡಿ ಮರಣೋತ್ತರ ಪರೀಕ್ಷೆ ನಡೆಸುವಂತೆಯೂ ತಮಗೆ ಮೃತದೇಹವನ್ನು ದೂರದ ಗದಗಕ್ಕೆ ಕೊಂಡು ಹೋಗಬೇಕಾಗಿಯೂ ವಿನಂತಿಸಿದರೂ, ವೈದ್ಯರು ಯಾವುದೇ ಕಾರಣಕ್ಕೂ ಮರಣೋತ್ತರ ಪರೀಕ್ಷೆಗೆ ಸಿದ್ಧರಾಗಲಿಲ್ಲ ಎಂದು ತಿಳಿದುಬಂದಿದ್ದು, ಪೊಲೀಸರು ಮಾನವೀಯತೆಯ ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿಕೊಡುವಂತೆ ವಿನಂತಿಸಿದರೂ ಒಪ್ಪದೇ ಪೋಲೀಸರ ಮೇಲೆಯೇ ವೈದ್ಯ ಗೌತಮ್ ಶೆಟ್ಟಿಗಾರ್ ರೇಗಿ ಗಲಾಟೆ ಮಾಡಿದ್ದಾರೆ ಎಂದು ದೂರಲಾಗಿದೆ.

ಕೂಲಿ ಕಾರ್ಮಿಕರಾಗಿರುವ ಈ ಕುಟುಂಬ ಹಣಕ್ಕಾಗಿಯೂ ಪರದಾಡುತ್ತಿದ್ದರು. ಯಾರ ಮನವಿಗೂ ವೈದ್ಯರು ಸ್ಪಂದಿಸದಿದ್ದಾಗ ಪೊಲೀಸರೇ ಮುಂದೆ ನಿಂತು ಸಾರ್ವಜನಿಕರ ಸಹಕಾರದೊಂದಿಗೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾತ್ರಿಯ ವೇಳೆ ಮಂಗಳೂರಿಗೆ ಕೊಂಡೊಯ್ದಿದ್ದಾರೆ. ಈ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News