×
Ad

ರಾಷ್ಟ್ರೀಯ ಯುವಜನೋತ್ಸವದಲ್ಲಿ ಮಿಂಚಿದ ಮಂಗಳೂರು ವಿವಿ ತಂಡ !

Update: 2018-02-23 15:11 IST

ಮಂಗಳೂರು, ಫೆ. 23: ಛತ್ತೀಸ್‌ಗಢದ ರಾಂಚಿಯಲ್ಲಿ ಫೆ. 16ರಿಂದ 20ರವರೆಗೆ ನಡೆದ 33ನೆ ಅಖಿಲ ಭಾರತ ರಾಷ್ಟ್ರೀಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೊಳಪಟ್ಟ ಕಾಲೇಜು ವಿದ್ಯಾರ್ಥಿಗಳ ತಂಡ ಮೂರು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ನಾಟಕ, ನೃತ್ಯ ಹಾಗೂ ಏಕ ಪಾತ್ರಾಭಿನಯ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಮಂಗಳೂರು ವಿವಿಯ ವಿದ್ಯಾರ್ಥಿ ಕಲಾವಿದರು ರಾಷ್ಟ್ರ ಮಟ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೆಸರು ತಂದಿದ್ದಾರೆ ಎಂದು ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಡಾ.ಬಿ. ಉದಯ ಬಾರ್ಕೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ತಂಡದಲ್ಲಿ ಭಾಗವಹಿಸಿದ್ದ 40 ವಿದ್ಯಾರ್ಥಿಗಳೊಂದಿಗೆ ಸಂಭ್ರಮವನ್ನು ಹಂಚಿಕೊಂಡ ಅವರು, ಸ್ಪರ್ಧೆಯಲ್ಲಿ ಭಾಗವಹಿಸುವ ಮೊದಲು ಈ ವಿದ್ಯಾರ್ಥಿ ತಂಡ ಹಿಂದೂಸ್ತಾನ್ ವಿಶ್ವವಿದ್ಯಾನಿಲಯ, ಕಾಂಚಿಪುರಂನಲ್ಲಿ ಡಿಸೆಂಬರ್‌ನಲ್ಲಿ ನಡೆದ 33ನೆ ದಕ್ಷಿಣ ವಲಯ ಯುವಜನೋತ್ಸವದಲ್ಲಿ ರಾಷ್ಟ್ರ ಮಟ್ಟಕ್ಕೆ ಅರ್ಹತೆ ಗಳಿಸಿಕೊಂಡಿತ್ತು ಎಂದು ತಿಳಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ನಡೆದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮೂರು ಪ್ರಥಮ ಪ್ರಶಸ್ತಿಗಳನ್ನು ಪಡೆದ ಮಂಗಳೂರು ವಿವಿಗೆ ಒಳಪಟ್ಟ ಈ ತಂಡದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ 15 ವಿದ್ಯಾರ್ಥಿಗಳು, ಗೋವಿಂದ ದಾಸ್ ಕಾಲೇಜು ಸುರತ್ಕಲ್ ಇಲ್ಲಿನ 25 ವಿದ್ಯಾರ್ಥಿಗಳಿದ್ದರು. ತಂಡವು ಸ್ಪರ್ಧೆಗೆ ಮಂಗಳೂರಿನಿಂದ ಬಸ್ಸು ಮೂಲಕವೇ ಪ್ರಯಾಣಿಸಿ ಹಿಂತಿರುಗಿರುವುದು ಮತ್ತೊಂದು ವಿಶೇಷವಾಗಿದೆ. ತಂಡ ತಮ್ಮ ಆರು ದಿನಗಳ ಪ್ರಯಾಣದ ವೇಳೆ ಅಗತ್ಯವಾದ ಖರ್ಚು ವೆಚ್ಚಗಳ ಮೇಲ್ವಿಚಾರಣೆಯನ್ನು ಡಾ. ಬಿ. ಉದಯ ಬಾರ್ಕೂರು ವಹಿಸಿದ್ದರು ಎಂದು ತಂಡದ ಮುಖ್ಯಸ್ಥರಾದ ಶಿವಶಂಕರ್ ತಿಳಿಸಿದರು.

ಗೋಷ್ಠಿಯಲ್ಲಿ ರಮೇಶ್ ಭಟ್, ವಿದ್ಯಾರ್ಥಿಗಳಾ ವೃಂದಾ, ಅನ್ವಿತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News