×
Ad

ಪದವಿಗಳ ಜತೆ ಪ್ರಬುದ್ಧತೆಯೂ ಅತ್ಯಗತ್ಯ: ಪ್ರೊ. ಯಡಪಡಿತ್ತಾಯ

Update: 2018-02-23 16:41 IST

ಮಂಗಳೂರು, ಫೆ. 23: ಪ್ರಬುದ್ಧತೆ ಇಲ್ಲದೆ ಯಾವುದೇ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆದರೂ ಪ್ರಯೋಜನವಾಗದು. ಆ ನಿಟ್ಟಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ದೆಸೆಯಲ್ಲೇ ತಮ್ಮ ಶಿಕ್ಷಣದೊಂದಿಗೆ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಕುಲಸಚಿವರು ಹಾಗೂ ವಾಣಿಜ್ಯ ವಿಭಾಗದ ಪ್ರೊ. ಸುಬ್ರವುಣ್ಯ ಯಡಪಡಿತ್ತಾಯ ಅಭಿಪ್ರಾಯಿಸಿದರು.

ಅವರು ಇಂದು ನಗರದ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಭವಿಷ್ಯದ ಉತ್ತಮ ಸಂಶೋಧನಾ ಬರಹಗಾರರಾಗಿ ರೂಪುಗೊಳಿಸಲು ಪೂರಕವಾಗುವ ಅಂತರ ಕಾಲೇಜು ಸಂಶೋಧನಾ ಸಮಾವೇಶ ‘ಅನ್ವೇಷಣ್’ ಉದ್ಘಾಟಿಸಿ ಮಾತನಾಡಿದರು.

ಉನ್ನತ ಶಿಕ್ಷಣವಿಂದು ಕೇವಲ ಪದವಿಗಳನ್ನು ಪಡೆಯುವುದಕ್ಕಾಗಿಯೇ ಸೀಮಿತವಾಗುತ್ತಿದೆ. ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ಪದವಿಗಳನ್ನು ಪಡೆದಾಗ ಅದು ಉತ್ಕೃಷ್ಟತೆಯನ್ನು ಪಡೆಯುತ್ತದೆ. ಅನ್ವೇಷಣೆಯಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ, ಪ್ರತಿಭಾ ಪ್ರದರ್ಶನಕ್ಕೆ ಅವಕಾಶವನ್ನು ಕಲ್ಪಿಸುತ್ತದೆ ಎಂದವರು ಹೇಳಿದರು.

ಶಿಕ್ಷಣದಲ್ಲಿ ಜ್ಞಾನವೆಂಬುದು ಕೇವಲ ಪ್ರಮಾಣ ಪತ್ರ ಪಡೆಯುವವರೆಗೆ ಮಾತ್ರವೇ ಸೀಮಿತಗೊಳ್ಳುತ್ತಿರುವುದು ಬೇಸರದ ಸಂಗತಿ. ಆ ಜ್ಞಾನ ಭವಿಷ್ಯದ ಜೀವನದಲ್ಲಿಯೂ ಬಳಕೆಯಾಗಬೇಕು. ಅದಕ್ಕಾಗಿ ವಿದ್ಯಾರ್ಥಿ ದೆಸೆಯಲ್ಲಿ ಹೆಚ್ಚು ಓದು, ಕ್ರಿಯಾಶೀಲತೆ, ಸಂಶೋಧನೆ ಜತೆಗೆ ವೌಲ್ಯಗಳಿಗೆ ಒತ್ತು ನೀಡಬೇಕು ಎಂದು ಅವರು ಸ್ನಾತಕೋ್ತರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ರಾಷ್ಟ್ರೀಯ ಮಹಿಳಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಕುಡ್ಪಿ ಜಗದಿೀಶ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಂಕಾಂ ಪರೀಕ್ಷೆಯಲ್ಲಿ 7ನೆ ರ್ಯಾಂಕ್ ಪಡೆದ ಬೆಸೆಂಟ್ ಸಂಧ್ಯಾ ಕಾಲೇಜಿನ ಬಹುಮುಖ ಪ್ರತಿಭೆಯ ವಿದ್ಯಾರ್ಥಿನಿ ದೀಕ್ಷಾ ರಾವ್ ಹಾಗೂ ಎಂಎ ಭರತನಾಟ್ಯಂನಲ್ಲಿ ಪ್ರಥಮ ರ್ಯಾಂಕ್ ಪಡೆದ, ಪ್ರಸ್ತುತ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಸಾತ್ವಿಕಾ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಹಿರಿಯ ಗ್ರಂಥಪಾಲಕರಾದ ವಾಸಪ್ಪ ಗೌಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲರಾದ ಡಾ. ಲಕ್ಷ್ಮೀನಾರಾಯಣ ಭಟ್, ತಾರಾ ಕೆ. ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News