×
Ad

2ನೆ ಹಂತದ ಯೋಜನೆಯ ಲೋಪದೋಷ ನಿವಾರಣೆಯಾಗಲಿ: ಮನಪಾ ವಿಪಕ್ಷ

Update: 2018-02-23 19:58 IST

ಮಂಗಳೂರು, ಫೆ. 23: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾದ ಪ್ರಥಮ ಹಂತದ ಎಡಿಬಿ ಯೋಜನೆಗಾಗಿ ವೆಚ್ಚ ಮಾಡಲಾದ ಸಾಲದ ಹಣ ಹಾಗೂ ಬಡ್ಡಿ ಸೇರಿ 502,66,41,978 ರೂ. ಒಟ್ಟು ಬಾಕಿ ಇದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಎಡಿಬಿ ಸಾಲ ಪಡೆದು ಕೈಗೆತ್ತಿಕೊಳ್ಳಲು ನಿರ್ಧರಿ ಸಲಾಗಿರುವ ದ್ವಿತೀಯ ಹಂತದ ಯೋಜನೆಯ ಲೋಪದೋಷಗಳನ್ನು ನಿವಾರಿಸಿ ಮುಂದುವರಿಯಬೇಕು ಎಂದು ಮನಪಾ ವಿಪಕ್ಷ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮನಪಾದ ವಿಪಕ್ಷ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು ಮಾಹಿತಿ ನೀಡಿದರು. ಎಡಿಬಿ ನೆರವಿನ ಸಾಲ ಯೋಜನೆ ಅತ್ಯಂತ ದುಬಾರಿಯಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ಸಾಲ ಪಾವತಿಸಬೇಕಾಗಿದೆ. ಪ್ರಥಮ ಹಂತದ ಯೋಜನೆಗಾಗಿ ಸಾಲದ ಅಸಲು 176,41, 37,401 ರೂ., ಬಡ್ಡಿ 326,25,04,577 ಸೇರಿ ಒಟ್ಟು ಬಾಕಿ ಹಣದಲ್ಲಿ ಈವರೆಗೂ ಒಂದು ರೂಪಾಯಿಯನ್ನೂ ಪಾವತಿಸಲಾಗಿಲ್ಲ. ಹೀಗಿರುವಾಗ ಮತ್ತೆ ದ್ವಿತೀಯ ಹಂತದ ಯೋಜನೆಗೆ ಸಾಲದ ಹಣದಲ್ಲಿ ನಡೆದರೆ ಆ ಹೊರೆಯನ್ನು ಸಾರ್ವಜನಿಕರು ಹೊರಬೇಕಾುತ್ತದೆ ಎಂದು ಅವರು ಹೇಳಿದರು.

ಮನಪಾ  ಸಭೆಯಲ್ಲಿ ವಿಪಕ್ಷದ ವಿರೋಧದ ನಡುವೆಯೂ ಎಡಿಬಿ ನೆರವಿನ ಒಳಚರಂಡಿ ಯೋಜನೆಗೆ 195 ಕೋಟಿ ರೂ., ನೀರಿನ ಸಂಪರ್ಕದ ವಿಸ್ತರಣೆಗೆ 218 ಕೋಟಿ ರೂ., ಅಮೃತ್ ಯೋಜನೆಯ 33.25 ಕೋಟಿರೂ. ಹಾಗೂ ಸ್ಮಾರ್ಟ್ ಸಿಟಿಯಡಿ 40 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ಪಡೆಯಲಾಗಿದೆ. ಎಡಿಬಿ ಪ್ರಥಮ ಹಂತದ ಯೋಜನೆಯಡಿ ಕುಡಿಯುವ ನೀರು ಯೋಜನೆಗೆ 106.319 ಕೋಟಿ ರೂ. ಖರ್ಚು ಮಾಡಿ 2026ರ ಜನಸಂಖ್ಯೆ ಆಧಾರದಲ್ಲಿ ವಾರವಿಡೀ ದಿನದ 24 ಗಂಟೆಯೂ ನೀರು ಕೊಡುವ ಭರವಸೆಯೊಂದಿಗೆ ಯೋಜನೆ 2013ಕ್ಕೆ ಪೂರ್ಣಗೊಂಡಿದೆ. ಆದರೆ 2018ರ ಜನಸಂಖ್ಯೆ ಆಧಾರದಲ್ಲಿಯೇ ಈ ವ್ಯವಸ್ಥೆಯಡಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಮತ್ತೆ 2046ರ ಜನಸಂಖ್ಯೆ ಆಧಾರದಲ್ಲಿ 291.25 ಕೋಟಿ ರೂ. ಹಣವನ್ನು ವೆಚ್ಚ ಮಾಡುವುದು ಅವೈಜ್ಞಾನಿಕ ಎಂದು ಅವರು ಆಕ್ಷೇಪಿಸಿದರು.

ಮಂಗಳೂರಿಗೆ ತುಂಬೆಯಿಂದ ಈಗಾಗಲೇ 160 ಎಂಎಲ್‌ಡಿ ನೀರು ಸರಬರಾಜು ಆಗುತ್ತಿದೆ. ಇದೀಗ ಮತ್ತೆ ಇಷ್ಟೊಂದು ಖರ್ಚು ಮಾಡಿ 10 ಎಂಎಲ್‌ಡಿ ಹೆಚ್ಚುವರಿ ನೀರು ತರಿಸುವ ಯೋಜನೆ ಅಗತ್ಯವಿದೆಯೇ ಎಂದು ಅವರು ಪ್ರಶ್ನಿಸಿದರು. 

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಪ್ರತಿಪಕ್ಷವಾಗಿ ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ದ್ವಿತೀಯ ಹಂತದ ಎಡಿಬಿ ಕಾಮಗಾರಿ ಚರ್ಚೆ ವೇಳೆ ಆಕ್ಷೇಪ ದಾಖಲಿಸಿದ್ದೇವೆ ಎಂದರು.  

ಗೋಷ್ಠಿಯಲ್ಲಿ ಪ್ರೇಮಾನಂದ ಶೆಟ್ಟಿ, ಸುರೇಂದ್ರ, ವಿಜಯ ಕುಮಾರ್ ಶೆಟ್ಟಿ, ದಿವಾಕರ, ರೂಪಾ ಡಿ. ಬಂಗೇರ, ಜಯಂತಿ ಆಚಾರ್, ರಾಜೇಂದ್ರ ಉಪಸ್ಥಿತರಿದ್ದರು.

ಪ್ರಗತಿ ಪರಿಶೀಲನಾ ಸಭೆ ನಡೆಸಲು ಆಗ್ರಹ
ಪ್ರಥಮ ಹಂತದ ಎಡಿಬಿಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಿರುವ ಸಚಿವ ರೋಶನ್ ಬೇಗ್‌ರವರು ಸಿಒಡಿ ತನಿಖೆಗೆ ಆದೇಶಿಸಿದ್ದಾರೆ. ಆದ್ದರಿಂದ ಎರಡನೆ ಹಂತದ ಎಡಿಬಿ ಯೋಜನೆ ಅನುಷ್ಠಾನಗೊಳಿಸುವ ಮೊದಲು ಸಚಿವರು ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಗತ್ಯ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸಬೇಕು. ಭ್ರಷ್ಟಾಚಾರ ಆಗದಂತೆ ಎಚ್ಚರಿಕೆ ವಹಿಸಬೇಕು ಸುಧೀರ್ ಶೆಟ್ಟಿ ಕಣ್ಣೂರು ಆಗ್ರಹಿಸಿದರು.

 

ಶೇ. 10ರ ಯೋಜನೆ !
ಮನಪಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುವ ಎಡಿಬಿ ದ್ವಿತೀಯ ಹಂತದ ಯೋಜನೆ ಶೇ. 10ರ ಯೋಜನೆ ಎಂದು ಶಾಸಕ ಜೆ.ಆರ್. ಲೋಬೊ ಅವರನ್ನು ಉಲ್ಲೇಖಿಸಿ ಆರೋಪಿಸಿದ ಸುಧೀರ್ ಶೆಟ್ಟಿ ಕಣ್ಣೂರು, ಮನಪಾದ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೆ, ಚರ್ಚಿಸದೆ ನೇರವಾಗಿ ಕಚೇರಿಯಲ್ಲಿಯೇ ಈ ಯೋಜನೆಯನ್ನು ತಯಾರಿಸಲಾಗಿದೆ ಎಂದರು.

10 ಪರ್ಸೆಂಟ್‌ನ ಯೋಜನೆ ಕುರಿತಾದ ಆರೋಪಕ್ಕೆ ದಾಖಲೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ನಮ್ಮ ಅವಧಿಯಲ್ಲಿ ಯೋಜನೆಗಳನ್ನು ತಯಾರಿಸು ವಾಗ ಕನ್ಸಲ್ಟಂಟ್‌ಗಳಿದ್ದರು. ಈಗ ಆ ವ್ಯವಸ್ಥೆ ಇಲ್ಲ. ಯಾವ ಕಾಮಗಾರಿ ಯಾರಿಗೆ ಕೊಡಬೇಕು ಎಂದು ಆಡಳಿತ ಪಕ್ಷದವರೇ ನಿರ್ಧರಿಸಿ ತುಂಡು ಗುತ್ತಿಗೆ ನೀಡುತ್ತಾರೆ. ಯೋಜನೆಯಲ್ಲಿನ ಭ್ರಷ್ಟಾಚಾರದ ಕುರಿತಾದ ಹೋರಾಟ ಮುಂದುವರಿಯಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News