ಉಡುಪಿ: ಎಸ್ಪಿ ‘ಫೋನ್ ಇನ್’ನಲ್ಲಿ ಮಂಗಗಳ ಕಾಟ, ನಾಡಾ ಕಚೇರಿ, ನೀರಿನ ಸಮಸ್ಯೆಗಳ ಬಗ್ಗೆಯೂ ದೂರು
ಉಡುಪಿ, ಫೆ. 23: ಕೇವಲ ಮಟ್ಕಾ, ಮರಳುಗಾರಿಕೆ, ಅಕ್ರಮ ಚಟುವಟಿಕೆ, ಸಂಚಾರಿ ಸಮಸ್ಯೆಗಳ ಕುರಿತ ಸಾರ್ವಜನಿಕ ದೂರುಗಳಿಗೆ ಸೀಮಿತವಾಗಿದ್ದ ಉಡುಪಿ ಎಸ್ಪಿ ಫೋನ್ ಇನ್ ಕಾರ್ಯಕ್ರಮವು ಈಗ ಪೊಲೀಸರ ವ್ಯಾಪ್ತಿ ಮೀರಿದ ದೂರುಗಳಿಗೂ ವೇದಿಕೆಯಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ನೀರಿನ ಸಮಸ್ಯೆ, ನಾಡಾ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ, ಮಂಗಗಳ ಕಾಟ ಕುರಿತ ದೂರುಗಳು ಕೂಡ ಸಾರ್ವಜನಿಕರಿಂದ ಕೇಳಿಬಂದವು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದ ಸಾರ್ವಜನಿಕರೊಬ್ಬರು, ಶಿರ್ವ ಪೊಲೀಸ್ ವಸತಿ ಗೃಹದ ಸಮೀಪದಲ್ಲಿರುವ ಹಳೆಯ ಕಟ್ಟಡದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮಂಗ ಗಳು ಬರುತ್ತಿದ್ದು, ಇದರಿಂದ ಸಮೀಪದ ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಅಲ್ಲಿರುವ ಮನೆಯನ್ನು ಧ್ವಂಸ ಮಾಡುವ ಮತ್ತು ಮರಗಳ ಗೆಲ್ಲುಗಳನ್ನು ಕಡಿಯುವ ಬಗ್ಗೆ ಕ್ರಮ ತೆಗೆದು ಕೊಳ್ಳಲಾಗುವುದು ಎಂದರು. ಬಳಿಕ ಅವರು ಈ ದೂರನ್ನು ಉಲ್ಲೇಖಿಸುತ್ತ ಇಂದು ಆಡು ಮುಟ್ಟದ ಸೊಪ್ಪಿಲ್ಲ, ಪೊಲೀಸರಿಗೆ ಸಂಬಂಧಿಸಿದ ವಿಷಯ ಇಲ್ಲ ಎಂಬಂತಾಗಿದೆ ಎಂದರು.
ವಂಡ್ಸೆ ನಾಡ ಕಚೇರಿಗೆ ಬೆಳಗ್ಗೆ ಹಾಗೂ ಸಂಜೆ ಹೋದರೂ ಸಿಬ್ಬಂದಿಗಳೇ ಇರುವುದಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ವ್ಯಕ್ತಿಯೊಬ್ಬರು ದೂರಿದರು. ಕೋಟ ಬೇಳೂರು ಗ್ರಾಪಂನಲ್ಲಿ ನೀರಿನ ಸಮಸ್ಯೆ ಬಗ್ಗೆ ದೂರಿದ ಸಾರ್ವಜನಿಕರೊಬ್ಬರು, ಕಳೆದ 6 ತಿಂಗಳಿನಿಂದ ನೀರು ಸರಬರಾಜು ಮಾಡು ತ್ತಿಲ್ಲ. ಈ ಬಗ್ಗೆ ಅರ್ಜಿ ಸಲ್ಲಿಸಿದರೂ ಪಿಡಿಒ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಎಸ್ಪಿ, ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ ದೂರುಗಳಲ್ಲ. ಆದರೂ ಸಂಬಂಧಟ್ಟವರ ಗಮನಕ್ಕೆ ಈ ವಿಚಾರವನ್ನು ತರಲಾಗುವುದು ಎಂದು ತಿಳಿಸಿದರು.
ಭಾರೀ ಗಾತ್ರದ ಲಾರಿಗಳ ಸಂಚಾರದಿಂದ ಕಾರ್ಕಳ ಕಲ್ಯಾ ಗ್ರಾಮದ ಕಲ್ಯಾಲ ರಸ್ತೆ ಹದಗೆಟ್ಟಿರುವ ಮತ್ತು ಬ್ರಹ್ಮಾವರ ಹೇರಾಡಿ ಸೇತುವೆ ಶಿಥಿಲ ಗೊಂಡಿ ರುವ ಬಗ್ಗೆ ದೂರಲಾಯಿತು. ಸ್ಥಳಕ್ಕೆ ಪೊಲೀಸ್ ಗಸ್ತು ವಾಹನವನ್ನು ಕಳುಹಿಸಿ ಅಂತಹ ಲಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
ಶಿವರಾತ್ರಿಯಂದು ಆದಿವುಡುಪಿ ರಸ್ತೆಯ ಬದಿಯ ಮನೆಗಳಿಗೆ ಮದ್ಯದ ಖಾಲಿ ಬಾಟಲಿಗಳನ್ನು ಎಸೆದು ಹೋಗಿರುವ ಬಗ್ಗೆ ದೂರಿನ ಕುರಿತು ಪರಿ ಶೀಲನೆ ನಡೆಸಲಾಗುವುದು ಎಂದು ಎಸ್ಪಿ ದೂರುದಾರರಿಗೆ ಭರವಸೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಡಲಾದ ಬ್ಯಾರಿಕೇಡ್‌ಗಳ ರಿಫ್ಲೆಕ್ಟರ್‌ಗಳ ಬಣ್ಣ ಮಾಸಿದ್ದು, ಅದನ್ನು ಸರಿಪಡಿಸುವಂತೆ ಸಾರ್ವಜನಿಕರೊಬ್ಬರು ಮನವಿ ಮಾಡಿ ದರು. ಕಾರ್ಕಳ ಪೇಟೆಯಲ್ಲಿ ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್‌ಗೆ ತೊಂದರೆ ಆಗುತ್ತಿರುವ ಬಗ್ಗೆ ಮತ್ತು ಮೂರು ಮಾರ್ಗದಿಂದ ಮಾರ್ಕೆಟ್ ಕಡೆಗೆ ಹೋಗುವ ರಸ್ತೆಯು ಅಗಲ ಕಿರಿದಾಗಿರುವ ಬಗ್ಗೆ ದೂರಲಾಯಿತು.
ಖಾಸಗಿ ಬಸ್‌ಗಳು ಹಾಗೂ ಶಾಲಾ ಬಸ್‌ಗಳು ಉದ್ಯೋಗಿಗಳನ್ನು, ಶಾಲಾ ಮಕ್ಕಳನ್ನು ಹತ್ತಿಸಿ, ಇಳಿಸಲು ಬಸ್ ನಿಲ್ದಾಣದ ಬಳಿಯೇ ನಿಲ್ಲಿಸುವುದರಿಂದ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಮಹಿಳೆಯೊಬ್ಬರು ದೂರಿದರು. ಈ ಬಗ್ಗೆ ಎಲ್ಲ ಶಾಲೆಗಳ ಆಡಳಿತ ಮಂಡಳಿಗೆ ಪತ್ರ ಬರೆಯಲಾಗುವುದು ಎಂದು ಎಸ್ಪಿ ಹೇಳಿದರು.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ವೈನ್ ಶಾಪ್‌ನಿಂದ ಮದ್ಯವನ್ನು ತಂದು ಸಮೀಪದ ಹೋಟೆಲ್‌ನಲ್ಲಿ ಸೇವಿಸುತ್ತಿರುವುದರಿಂದ ಸ್ಥಳೀಯ ನಿವಾಸಿ ಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ದೂರಲಾಯಿತು. ಗಂಗೊಳ್ಳಿ ತ್ರಾಸಿ ಜಂಕ್ಷನ್‌ನಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ದೂರಿಗೆ ಸ್ಪಂದಿಸಿದ ಎಸ್ಪಿ, ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.
ಇಂದು ಒಟ್ಟು 23 ಸಾರ್ವಜನಿಕರ ದೂರಿನ ಕರೆಗಳನ್ನು ಸ್ವೀಕರಿಸಲಾಗಿದೆ. ಈ ಸಂದರ್ಭದಲ್ಲಿ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಪೊಲೀಸ್ ವಸತಿಗೃಹದ ಸಮಸ್ಯೆ ಬಗ್ಗೆ ದೂರು
ಮಣಿಪಾಲ ಪೊಲೀಸ್ ವಸತಿ ಗೃಹದ ಸಮೀಪದಲ್ಲಿರುವ ಲಾಡ್ಜ್‌ವೊಂದರ ತ್ಯಾಜ್ಯವನ್ನು ತೆರೆದ ಚರಂಡಿಗೆ ಬಿಡುವುದರಿಂದ ವಸತಿಗೃಹದ ಮಕ್ಕಳು ಹಾಗೂ ಪೊಲೀಸರಿಗೆ ರೋಗ ಭೀತಿ ಎದುರಾಗಿದೆ ಎಂದು ಮಹಿಳೆಯೊಬ್ಬರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ಈ ಸಮಸ್ಯೆ ಬಗ್ಗೆ ಪೌರಾಯುಕ್ತರ ಗಮನಕ್ಕೆ ತಂದು ಮೂರು ನಾಲ್ಕು ದಿನಗಳ ಒಳಗಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಪಡುಬಿದ್ರೆ ಟೋಲ್‌ಗೇಟ್ ಶುಲ್ಕವನ್ನು ತಪ್ಪಿಸಲು ಸಮೀಪದ ಸಣ್ಣ ರಸ್ತೆಯಲ್ಲಿ ಘನ ವಾಹನಗಳ ಸಂಚರಿಸುತ್ತಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರಿದರು. ಈ ಬಗ್ಗೆ ಪರಿಶೀಲಿಸಿ ಘನ ವಾಹನಗಳು ಸಂಚರಿಸಲು ಆಗದಂತೆ ಬ್ಯಾರಿ ಕೇಡ್ ನಿರ್ಮಿಸಲು ರಾ.ಹೆ. ಇಲಾಖೆಗೆ ತಿಳಿಸಲಾಗುವುದು ಎಂದು ಎಸ್ಪಿ ತಿಳಿಸಿದರು.
ಕಳೆದ ಎರಡು ವಾರಗಳಲ್ಲಿ ಉಡುಪಿ ಜಿಲ್ಲೆಯಾದ್ಯಂತ 20 ಮಟ್ಕಾ ಪ್ರಕರಣ ಗಳಲ್ಲಿ 20 ಮಂದಿ, 8 ಜುಗಾರಿ ಪ್ರಕರಣಗಳಲ್ಲಿ 45 ಮಂದಿ, 9 ಗಾಂಜಾ ಪ್ರಕರಣದಲ್ಲಿ 9 ಮಂದಿಯನ್ನು ಬಂಧಿಸಲಾಗಿದೆ.
164 ಕೋಟ್ಪಾ, ಕುಡಿದು ವಾಹನ ಚಾಲನೆ 7, ಪರವಾನಿಗೆ ಇಲ್ಲದೆ ಚಾಲನೆ 7, ಕರ್ಕಶ ಹಾರ್ನ್ 110, ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ 45, ಹೆಲ್ಮೆಟ್ ಇಲ್ಲದ ಬೈಕ್ ಸವಾರಿ 1014, ಅತಿವೇಗ ಚಾಲನೆ 147 ಮತ್ತು ಇತರ ಸಂಚಾರಿ 1654 ಪ್ರಕರಣ ಗಳನ್ನು ದಾಖಲಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.