×
Ad

ಬಂಟ್ವಾಳ : ಜಾರ್ಖಂಡ್ ಸರಕಾರದ ವಿರುದ್ಧ ಪಿಎಫ್‌ಐ ಪ್ರತಿಭಟನೆ

Update: 2018-02-23 20:22 IST

ಬಂಟ್ವಾಳ, ಫೆ. 23: ಜಾರ್ಖಂಡ್ ಸರಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿದ ಕ್ರಮವನ್ನು ಖಂಡಿಸಿ ಪಿಎಫ್‌ಐ ಬಂಟ್ವಾಳ ಹಾಗೂ ಫರಂಗಿಪೇಟೆ ಘಟಕದ ವತಿಯಿಂದ ಶುಕ್ರವಾರ ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಪಿಎಫ್‌ಐ ಜಿಲ್ಲಾ ಸಮಿತಿ ಸದಸ್ಯ ಅಶ್ರಫ್ ಮಾಚಾರ್ ಮಾತನಾಡಿ, 2015ರಿಂದ ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ಪಿಎಫ್‌ಐ ಕಾರ್ಯಾಚರಿಸುತ್ತಿದ್ದು, ಸರಕಾರ ಹಾಗೂ ಅಧಿಕಾರಿಗಳ ಪಕ್ಷಪಾತ ಕೂಡಿದ ಪ್ರತಿಕ್ರಿಯೆಗಳನ್ನು ಸಂಘಟನೆಯೂ ಎದುರಿಸುತ್ತಾ ಬಂದಿದೆ. ಇದನ್ನು ಸಹಿಸಲಾಗದ ಸಂಘ ಪರಿವಾರ ನೇತೃತ್ವದ ಜಾರ್ಖಂಡ್ ಸರಕಾರ, ತಮ್ಮ ಸೈದ್ಧಾಂತಿಕ ನಿಲುವನ್ನು ಎದುರಿಸಲಾಗದೇ "ನಿಷೇಧ" ಎಂಬ ಅಸ್ತ್ರವನ್ನು ಬಳಸಿದೆ ಎಂದು ಆರೋಪಿಸಿದರು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ರಾಜಸ್ಥಾನದಲ್ಲಿ ಶಂಬೂಲಾಲ್ ಎಂಬ ಸಂಘಪರಿವಾರದ ಕಾರ್ಯಕರ್ತ ಅಫ್ರಝುಲ್ ಎಂಬ ವ್ಯಕ್ತಿಯ ಹತ್ಯೆ ನಡೆಸಿ, ನಂತರ ಬೆಂಕಿಕೊಟ್ಟು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಘಟನೆ ಐಸಿಸ್‌ನ್ನು ಮೀರಿಸುವಂತಿದೆ. ಜಾರ್ಖಂಡ್‌ನಲ್ಲಿ ಗುಂಪು ಹಿಂಸೆಯ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದ ದಿನವೇ ಪಾಪ್ಯುಲರ್ ಫ್ರಂಟನ್ನು ನಿಷೇಧ ಮಾಡಿದೆ. ಇದು ಹಿಂಸೆಯ ವಿರುದ್ಧ ನಡೆಸುವ ಧ್ವನಿಯನ್ನು ಹತ್ತಿಕ್ಕುವ ಕ್ರಮ ಎಂದು ಹೇಳಿದರು.

ಪಿಎಫ್‌ಐ ಸಂವಿಧಾನ ಬದ್ಧವಾಗಿರುವ ಸಂಘಟನೆ. ದೇಶದ ಜಾತ್ಯಾತೀತ ಸಮಾನತೆಯನ್ನು ಎತ್ತಿಹಿಡಿದು ಸಂವಿಧಾನ ವಿರೋಧಿಗಳನ್ನು ದೇಶಕ್ಕೆ ಪರಿಚಯಿಸಿದ ಪಿಎಫ್‌ಐ ವಿರುದ್ಧ ಫ್ಯಾಸಿಸ್ಟ್ ಶಕ್ತಿಗಳು ನಿಷೇಧ ಎಂಬ ಅಸ್ತ್ರ ಬಳಸುವಾಗ ಇಲ್ಲಿಯ ಜಾತ್ಯಾತೀತ ಪಕ್ಷವೆಂದೆನಿಕೊಂಡಿರುವ ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್, ಬಿಎಸ್‌ಪಿ ಮುಂತಾದ ರಾಜಕೀಯ ಪಕ್ಷಗಳು ಮೌನತಾಳಿದ್ದು, ಈ ದೇಶದ ಅಪಾಯದ ಸೂಚನೆಗಳಾಗಿವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರಾಧ್ಯಕ್ಷ ಶಾಹುಲ್ ಎಸ್.ಎಚ್., ಪಿಎಫ್‌ಐ ಬಂಟ್ವಾಳ ಘಟಕದ ಪ್ರಧಾನ ಕಾರ್ಯದರ್ಶಿ ಸೆಲೀಂ ಕೆ., ಪುರಸಭಾ ಸದಸ್ಯರಾದ ಮುನೀಶ್ ಅಲಿ, ಇಕ್ಬಾಲ್ ಗೂಡಿನಬಳಿ ಮತ್ತಿತರರು ಉಪಸ್ಥಿತರಿದ್ದರು. ರಹಿಮಾನ್ ಮಠ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News