×
Ad

ಪಿಎಫ್‌ಐ ನಿಷೇಧ ಹಿಂಪಡೆಯಲು ಆಗ್ರಹ: ಜಾರ್ಖಂಡ್ ಸರಕಾರದ ವಿರುದ್ಧ ಪುತ್ತೂರಿನಲ್ಲಿ ಪ್ರತಿಭಟನೆ

Update: 2018-02-23 20:35 IST

ಪುತ್ತೂರು, ಫೆ. 23: ಜಾರ್ಖಂಡ್‌ನಲ್ಲಿ ಪಿಎಫ್‌ಐ ಸಂಘಟನೆಯ ಮೇಲೆ ಹೇರಿರುವ ನಿಷೇಧವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಮತ್ತು ನಿಷೇಧದ ಹೆಸರಿನಲ್ಲಿ ಸಂಘಟನೆಯ ಸದಸ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸುವಂತೆ ಒತ್ತಾಯಿಸಿ ಪಿಎಫ್‌ಐ  ವತಿಯಿಂದ ಶುಕ್ರವಾರ ಸಂಜೆ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿನ ಗಾಂಧಿ ಕಟ್ಟೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಅವರು ಸಂವಿಧಾನ ವಿರೋಧಿಗಳಾದ ಆರ್‌ಎಸ್‌ಎಸ್ ಮನುವಾದಿಗಳು ಪ್ರಜಾಸತ್ತಾತ್ಮಕವಾಗಿ ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸುತ್ತಿರುವ ಪಿಎಫ್‌ಐ ನಿಷೇಧಕ್ಕೆ ಮುಂದಾಗಿದ್ದು, ನಿಷೇಧದ ಹೆಸರಿನಲ್ಲಿ ಭಯಪಡಿಸುವ ಪ್ರಯತ್ನ ನಡೆಸುತ್ತಿದೆ. ಆದರೆ ಈ ದೇಶವನ್ನು ಕಟ್ಟಿರುವ ನಾವು ಇಲ್ಲಿಯೇ ಜೀವಿಸಿ ಇಲ್ಲಿಯೇ ಸಾಯುತ್ತೇವೆ. ಯಾವುದೇ ನಿಷೇಧಕ್ಕೆ ಹೆದರಿ ದೇಶಬಿಟ್ಟು ಹೋಗುವುದಿಲ್ಲ. ಈ ಬಗ್ಗೆ ಭಯ ಪಡಿಸುವ ಅಗತ್ಯವಿಲ್ಲ ಎಂದರು.

ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಪಿಎಫ್‌ಐ ಸ್ಥಾಪನೆಗೊಂಡಿದೆ. ಶೇ.3 ಇರುವ ಮೇಲ್ಜಾತಿಯವರು ದೇಶವನ್ನು ಕೊಳ್ಳೆಹೊಡೆದು ಶೇ.97 ಕೆಳಜಾತಿಯವರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಅಲ್ಲದೆ ನಮ್ಮ ದೇಶದ ಶೇ.72 ಸಂಪತ್ತು ಶೇ.1 ಜನರಲ್ಲಿದೆ. ಜಾತಿಯ ಅಸಮಾನತೆ, ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಾಗೂ ಸಮಾಜದ ಎಲ್ಲಾ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದೆ. ಜಾತಿ ಆಧಾರದಲ್ಲಿ ಯಾರೂ ಹಿಂದುಳಿಯಬಾರದು ಎಂದು ಶ್ರಮಿಸುತ್ತಿದೆ. ಇದನ್ನು ಸಹಿಸದ ಫ್ಯಾಸ್ಟಿಸ್ಟ್‌ವಾದಿಗಳು ಸಂಘಟನೆಯನ್ನು ನಿಷೇಧಿಸುವ ಹುನ್ನಾರ ನಡೆಯುತ್ತಿದೆ. ಮನುವಾದವನ್ನು ತಡೆಯುವ ಪರ್ಯಾಯ ರಾಜಕೀಯ ವ್ಯವಸ್ಥೆ ದೇಶದಲ್ಲಿಲ್ಲ. ಸಂಘಟನೆಯ ನಿಷೇಧ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮತ್ತು ಕಾನೂನು ವಿರೋಧಿಯಾಗಿದೆ ಎಂದರು.

ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದೀಕ್, ಪಿಎಫ್‌ಐ ಪುತ್ತೂರು ಜಿಲ್ಲಾ ಅಧ್‌ಯಕ್ಷ ಅಬೂಬಕ್ಕರ್ ರಿಝ್ವನ್, ಪ್ರಧಾನ ಕಾರ್ಯದರ್ಶಿ ಜಾಬಿರ್ ಅರಿಯಡ್ಕ, ಪುತ್ತೂರು ಡಿವಿಷನ್ ಅಧ್ಯಕ್ಷ ಅಝೀರ್ ಕಬಕ, ಕುಂಬ್ರ ಡಿವಿಷನ್ ಅಧ್ಯಕ್ಷ ಶರೀಫ್ ಕಟ್ಟತ್ತಾರು, ಸವಣೂರು ಡಿವಿಷನ್ ಅಧ್ಯಕ್ಷ ಸಿದ್ದೀಕ್ ಅಲೆಕ್ಕಾಡಿ, ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಬಾವು, ರಫೀಕ್ ಎಂ.ಎಸ್, ಶಾಕಿರ್ ಕಟ್ಟತ್ತಾರು, ಇಸ್ಮಾಯಿಲ್ ಕೆಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News