ಬುಲ್‌ಡೋಝರ್ ಬಳಸಿ ರೊಹಿಂಗ್ಯಾ ಗ್ರಾಮಗಳ ಅಳಿಸಿ ಹಾಕುತ್ತಿರುವ ಮ್ಯಾನ್ಮಾರ್

Update: 2018-02-23 15:37 GMT

ಬ್ಯಾಂಕಾಕ್ (ಥಾಯ್ಲೆಂಡ್), ಫೆ. 23: ಮೊದಲು ಮ್ಯಾನ್ಮಾರ್ ಸೇನೆಯು ರೊಹಿಂಗ್ಯಾ ಮುಸ್ಲಿಮರ ಗ್ರಾಮಗಳನ್ನು ಸುಟ್ಟು ಹಾಕಿತು. ಈಗ ಮ್ಯಾನ್ಮಾರ್ ಸರಕಾರ ಬುಲ್‌ಡೋಝರ್‌ಗಳನ್ನು ಬಳಸಿ ಅವುಗಳನ್ನು ಭೂಮಿಯಿಂದಲೇ ಅಳಿಸಿಹಾಕುತ್ತಿದೆ. ದೇಶದ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮ್ ಸಮುದಾಯದ ವಿರುದ್ಧ ನಡೆದ ಹತ್ಯಾಕಾಂಡದ ಮಹತ್ವದ ಪುರಾವೆಗಳನ್ನು ನಾಶಪಡಿಸುವ ಕೃತ್ಯದಲ್ಲಿ ಮ್ಯಾನ್ಮಾರ್ ಸರಕಾರ ತೊಡಗಿದೆ ಎಂಬುದಾಗಿ ಮಾನವಹಕ್ಕು ಗುಂಪುಗಳು ಹೇಳಿವೆ.

ಸಂಘರ್ಷಪೀಡಿತ ರಖೈನ್ ರಾಜ್ಯದ ಉಪಗ್ರಹ ಚಿತ್ರಗಳನ್ನು ಅಮೆರಿಕದ ಕೊಲರಾಡೊದಲ್ಲಿರುವ ‘ಡಿಜಿಟಲ್ ಗ್ಲೋಬ್’ ಎಂಬ ಸಂಸ್ಥೆಯು ಶುಕ್ರವಾರ ‘ಅಸೋಸಿಯೇಟಡ್ ಪ್ರೆಸ್’ ಸುದ್ದಿ ಸಂಸ್ಥೆಗೆ ನೀಡಿದೆ.

ಇತ್ತೀಚಿನ ವಾರಗಳಲ್ಲಿ ಡಝನ್‌ಗಟ್ಟಳೆ ಖಾಲಿ ಗ್ರಾಮಗಳು ಸಂಪೂರ್ಣವಾಗಿ ನೆಲಸಮವಾಗಿರುವುದನ್ನು ಈ ಚಿತ್ರಗಳು ತೋರಿಸುತ್ತವೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಅಲ್ಲಿನ ರೊಹಿಂಗ್ಯಾ ಗ್ರಾಮಗಳಿಗೆ ಬೆಂಕಿ ಹಚ್ಚಲಾಗಿತ್ತು. ಮ್ಯಾನ್ಮಾರ್ ಸೇನೆಯ ಅಮಾನುಷ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 7 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಧ್ವಂಸಗೊಂಡಿರುವ ವಲಯವೊಂದರಲ್ಲಿ ಪುನರ್ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡಿರುವುದಾಗಿ ಮ್ಯಾನ್ಮಾರ್ ಸರಕಾರ ಹೇಳಿಕೊಂಡಿದೆ. ಆದರೆ, ಈ ಕಾರ್ಯಾಚರಣೆಯು ಮಾನವಹಕ್ಕುಗಳ ಹೋರಾಟಗಾರರಲ್ಲಿ ತೀವ್ರ ಕಳವಳ ಹುಟ್ಟಿಸಿದೆ. ಯಾವುದಾದರೂ ವಿಶ್ವಾಸಾರ್ಹ ತನಿಖೆ ಆರಂಭಗೊಳ್ಳುವ ಮುನ್ನ ಅಪರಾಧ ಸ್ಥಳಗಳನ್ನು ಸರಕಾರ ನಾಶಗೊಳಿಸುತ್ತಿದೆ ಎಂದು ಅವರು ಹೇಳುತ್ತಾರೆ.

ಈ ಬೆಳವಣಿಗೆಯಿಂದ ರೊಹಿಂಗ್ಯಾ ನಿರಾಶ್ರಿತರೂ ಆತಂಕಿತರಾಗಿದ್ದಾರೆ. ತಮ್ಮ ಅಳಿದುಳಿದ ಗುರುತುಗಳನ್ನು ನಾಶಪಡಿಸುವ ಮೂಲಕ ಮ್ಯಾನ್ಮಾರ್ ಸರಕಾರ ತಮ್ಮ ವಾಪಸಾತಿಯನ್ನು ಅಸಾಧ್ಯವಾಗುವಂತೆ ಮಾಡುತ್ತಿದೆ ಎಂದು ಅವರು ಭಾವಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News