ಅತ್ಯಂತ ಹಳೆಯ ಗುಹಾಕಲೆ ಬಿಡಿಸಿದ್ದು ಆಧುನಿಕ ಮಾನವರಲ್ಲ!

Update: 2018-02-23 15:54 GMT

  ಲಂಡನ್, ಫೆ. 23: ಜಗತ್ತಿನ ಅತ್ಯಂತ ಹಳೆಯ ಗುಹೆ ಚಿತ್ರಗಳನ್ನು ಬಿಡಿಸಿದ್ದು ನಿಯಾಂಡರ್‌ತಾಲ್ ಮಾನವರು, ಆಧುನಿಕ ಮಾನವರಲ್ಲ. ಈಗ ನಾಶವಾಗಿರುವ ನಮ್ಮ ಸೋದರ ಸಂಬಂಧಿಗಳು (ನಿಯಾಂಡರ್‌ತಾಲ್‌ಗಳು) ಈ ಹಿಂದೆ ಭಾವಿಸಲಾಗಿರುವಂತೆ ಸಂಸ್ಕೃತಿಹೀನರಾಗಿರಲಿಲ್ಲ ಎಂಬುದನ್ನು ಅಧ್ಯಯನವೊಂದು ಕಂಡುಕೊಂಡಿದೆ.

ಸ್ಪೇನ್‌ನ ಮೂರು ಗುಹೆಗಳಲ್ಲಿ ಪತ್ತೆಯಾಗಿರುವ ಚಿತ್ರಗಳ ವೈಜ್ಞಾನಿಕ ವಿಶ್ಲೇಷಣೆಯು, ಈ ಚಿತ್ರಗಳನ್ನು 64,000 ವರ್ಷಗಳ ಹಿಂದೆ ಬಿಡಿಸಲಾಗಿದೆ ಎಂದು ತಿಳಿಸುತ್ತದೆ. ಅಂದರೆ, ಆಧುನಿಕ ಮಾನವರು ಯುರೋಪ್‌ಗೆ ಬರುವ 20,000 ವರ್ಷಗಳ ಮೊದಲೇ ಈ ಚಿತ್ರಗಳನ್ನು ರಚಿಸಲಾಗಿತ್ತು.

ಈ ಅಧ್ಯಯನವು ‘ಸಯನ್ಸ್’ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.

‘‘ಇದೊಂದು ನಂಬಲಸಾಧ್ಯ ರೋಮಾಂಚಕಾರಿ ಸಂಶೋಧನೆಯಾಗಿದೆ. ನಿಯಾಂಡರ್‌ತಾಲ್ ಮಾನವರು ಈಗ ಭಾವಿಸಲಾಗಿರುವುದಕ್ಕಿಂತ ತುಂಬಾ ಸುಸಂಸ್ಕೃತರಾಗಿದ್ದರು ಎನ್ನುವುದನ್ನು ಇದು ತೋರಿಸುತ್ತದೆ’’ ಎಂದು ಬ್ರಿಟನ್‌ನ ಸೌತಾಂಪ್ಟನ್ ವಿಶ್ವವಿದ್ಯಾನಿಲಯ ಪ್ರಾಚ್ಯಶಾಸ್ತ್ರಜ್ಞ ಕ್ರಿಸ್ ಸ್ಟಾಂಡಿಶ್ ಹೇಳುತ್ತಾರೆ.

 ‘‘ನಾವು ಪತ್ತೆಹಚ್ಚಿರುವ ಚಿತ್ರಗಳು ಜಗತ್ತಿನ ಅತ್ಯಂತ ಹಳೆಯ ಗಮನಕ್ಕೆ ಬಂದಿರುವ ಚಿತ್ರಗಳು ಎಂಬುದಾಗಿ ನಮ್ಮ ವಿಶ್ಲೇಷಣೆಗಳು ಹೇಳುತ್ತವೆ. ಆಧುನಿಕ ಮಾನವರು ಆಫ್ರಿಕದಿಂದ ಯುರೋಪ್‌ಗೆ ಬರುವ ಕನಿಷ್ಠ 20,000 ವರ್ಷಗಳ ಹಿಂದೆ ಅವುಗಳನ್ನು ರಚಿಸಲಾಗಿದೆ. ಹಾಗಾಗಿ, ಅವುಗಳನ್ನು ನಿಯಾಂಡರ್‌ತಾಲ್‌ಗಳೇ ರಚಿಸಿರಬೇಕು’’ ಎಂದು ಸ್ಟಾಂಡಿಶ್ ಹೇಳಿದ್ದಾರೆ.

ಇದರ ಪ್ರಕಾರ, ಪ್ರಾಣಿಗಳ ಚಿತ್ರಗಳು, ಬಿಂದುಗಳು ಮತ್ತು ರೇಖಾಗಣಿತದ ಚಿಹ್ನೆಗಳು ಸೇರಿದಂತೆ ಹಿಮಯುಗದ ಗುಹಾ ಕಲೆಯನ್ನೂ ನಿಯಾಂಡರ್‌ತಾಲ್‌ಗಳೇ ರಚಿಸಿರಬೇಕು.

ನಿಯಾಂಡರ್‌ತಾಲ್‌ಗಳು ಹೋಮೊ ಸೆಪಿಯನ್ (ಆಧುನಿಕ ಮಾನವರ)ರ ಸೋದರ ಸಂಬಂಧಿಗಳಾಗಿದ್ದಾರೆ. ಆ ಸಮಯದಲ್ಲಿ ಯುರೋಪ್‌ನಲ್ಲಿ ಇದ್ದ ಏಕೈಕ ಮಾನವ ತಳಿ ನಿಯಾಂಡರ್‌ತಾಲ್‌ಗಳಾಗಿದ್ದರು.

ಕಾಲ ನಿರ್ಣಯಕ್ಕೆ ಆಧುನಿಕ ಪರೀಕ್ಷೆ

ಈ ಗುಹಾಚಿತ್ರಗಳ ಕಾಲವನ್ನು ನಿರ್ಣಯಿಸಲು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ‘ಯುರೇನಿಯಂ-ತೋರಿಯಂ ಡೇಟಿಂಗ್’ ಎಂಬ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿತ್ತು.

ಈವರೆಗೆ, ಗುಹಾಚಿತ್ರಗಳನ್ನು ಬಿಡಿಸಿದ್ದು ಆಧುನಿಕ ಮಾನವರೇ ಎಂಬುದಾಗಿ ತಿಳಿಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News