ಎಚ್1 ಬಿ ವೀಸಾ ಇನ್ನಷ್ಟು ಕಠಿಣ: ಭಾರತೀಯ ಐಟಿ ಕಂಪೆನಿಗಳಿಗೆ ಸಂಕಷ್ಟ

Update: 2018-02-23 16:24 GMT

ವಾಶಿಂಗ್ಟನ್,ಫೆ.23: ಟ್ರಂಪ್ ಆಡಳಿತವು ಎಚ್1ಬಿ ವೀಸಾ ನೀತಿಯನ್ನು ಕಠಿಣಗೊಳಿಸಿದ್ದು, ಇದರಿಂದ ಭಾರತದ ಮಾಹಿತಿತಂತ್ರಜ್ಞಾನ (ಐಟಿ) ಕಂಪೆನಿಗಳು ಹಾಗೂ ಅವುಗಳ ಉದ್ಯೋಗಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಭೀತಿ ವ್ಯಕ್ತವಾಗಿದೆ.

 ಅಮೆರಿಕದ ಐಟಿ ಕಂಪೆನಿಗಳು ತಮ್ಮ ಕಾರ್ಯಗಳಿಗೆ ಮೂರನೆ ಸಂಸ್ಥೆಗಳ ಉದ್ಯೋಗಿಗಳನ್ನು ಬಳಸಿಕೊಳ್ಳುವಾಗ ಇನ್ನು ಮುಂದೆ 2018ರ ವಲಸೆ ಮತ್ತು ನಾಗರಿಕತ್ವ ಸೇವೆಗಳ ನೀತಿಗಳಲ್ಲಿ ಸೂಚಿಸಲಾದ ಮಾನದಂಡಗಳ ಅನ್ವಯವೇ ವಿದೇಶಿ ಉದ್ಯೋಗಿಗಳಿಗೆ ಎಚ್1ಬಿ ವೀಸಾ ನೀಡಬೇಕಾಗುತ್ತದೆ.

ಅಮೆರಿಕ ಸರಕಾರದ ನೂತನ ನಾಗರಿಕ ಹಾಗೂ ವಲಸೆ ನೀತಿಯ ಪ್ರಕಾರ ನಿರ್ದಿಷ್ಟ ಕಾರಣ ಹಾಗೂ ನಿರ್ದಿಷ್ಟ ಅವಧಿಗೆ ಮಾತ್ರವೇ ವಿದೇಶಿ ಉದ್ಯೋಗಿಗಳನ್ನು ಅಮೆರಿಕದ ಕಂಪೆನಿಗಳು ಉದ್ಯೋಗಕ್ಕಾಗಿ ಕರೆಸಿಕೊಳ್ಳಬಹುದಾಗಿದೆ. ಭವಿಷ್ಯದಲ್ಲಿ ಲಭಿಸಬಹುದಾದ ಯೋಜನೆಗಳಿಗಾಗಿ ಮುಂಚಿತವಾಗಿಯೇ ಹೊರದೇಶಗಳಿಂದ ಉದ್ಯೋಗಿಗಳನ್ನು ಕರೆಸಿಕೊಳ್ಳುವುದಕ್ಕೆ ಅವಕಾಶ ನೀಡಕೂಡದೆಂದು ನೂತನ ವಲಸೆ ಮತ್ತು ಪೌರತ್ವ್ವ ಸೇವೆಗಳ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ವಿದೇಶಗಳಿಂದ ಕರೆಸಿಕೊಳ್ಳುವ ಉದ್ಯೋಗಿಗಳು ನೀತಿಯಲ್ಲಿರುವ ಮಾನದಂಡಗಳ ಕಟ್ಟುನಿಟ್ಟಾಗಿ ಒಳಪಡಬೇಕಾಗುತ್ತದೆ ಹಾಗೂ ನೀತಿಯಲ್ಲಿ ಸೂಚಿಸಲಾಗಿರುವ ವಿಶೇಷ ಕೌಶಲ್ಯತೆಯನ್ನು ಹೊಂದಿರಬೇಕೆಂಬ ನಿರ್ಬಂಧಗಳನ್ನು ವಿಧಿಸಲಾಗಿದೆ.

 ಅಮೆರಿಕನ್ ಉದ್ಯೋಗಿಗಳ ಕೊರತೆಯಿರುವ ಕ್ಷೇತ್ರಗಳಲ್ಲಿ ಉನ್ನತ ಕೌಶಲ್ಯದ ವಿದೇಶಿ ಉದ್ಯೋಗಿಗಳ ಸೇವೆಯನ್ನು ಬಳಸಿಕೊಳ್ಳುವುದಕ್ಕಾಗಿ ಅವರಿಗೆ ಎಚ್1ಬಿ ವೀಸಾ ನೀತಿಯಡಿ ತಾತ್ಕಾಲಿಕ ವೀಸಾಗಳನ್ನು ಒದಗಿಸಲಾಗುತ್ತದೆ.

    ಪ್ರಸಕ್ತ ಎಚ್1ಬಿ ವೀಸಾದ ಮೂರು ವರ್ಷಗಳ ಅವಧಿಯನ್ನು ಕಡಿತಗೊಳಿಸಲು ಕೂಡಾ ಟ್ರಂಪ್ ಆಡಳಿತ ನಿರ್ಧರಿಸಿದೆ. ಅಮೆರಿಕಕ್ಕೆ ಆಗಮಿಸಿದ ವಿದೇಶಿ ಉದ್ಯೋಗಿಗಳು ಆಯಾ ಕಂಪೆನಿಯಲ್ಲಿ ತಮ್ಮ ಉದ್ದೇಶಿತ ಕೆಲಸ ಮೂರು ವರ್ಷಗಳಿಗಿಂತಲೂ ಕಡಿಮೆ ಅವಧಿಯೊಳಗೆ ಪೂರ್ಣಗೊಂಡಲ್ಲಿ ಅವರ ಎಚ್1ಬಿ ವೀಸಾ ಅಲ್ಲಿಗೆ ಮುಕ್ತಾಯಗೊಳ್ಳಲಿದೆ.

ವಿದೇಶಿ ಉದ್ಯೋಗಿಗಳನ್ನು ಕರೆಯಿಸಿಕೊಳ್ಳುವ ಅಮೆರಿಕನ್ ಸಂಸ್ಥೆಗಳು ತಾವು ಅವರನ್ನು ಯಾವ ಕಾರಣಕ್ಕಾಗಿ ಕರೆಯಿಸಿಕೊಳ್ಳುತ್ತಿದ್ದೇವೆ ಎಂಬ ಬಗ್ಗೆ ಸರಕಾರಕ್ಕೆ ಮಾಹಿತಿ ನೀಡಬೇಕಾಗಿದೆ. ಅಲ್ಲದೆ ಆ ಉದ್ಯೋಗಕ್ಕೆ ಸ್ವದೇಶದ ಉದ್ಯೋಗಿಗಳನ್ನು ನೇಮಿಸದೆ ವಿದೇಶಿ ಉದ್ಯೋಗಿಗಳನ್ನು ಯಾಕೆ ನಿಯೋಜಿಸಲಾಗಿದೆಯೆಂಬ ಬಗೆಗೂ ಅದು ವಿವರಣೆ ನೀಡಬೇಕಾಗಿದೆ. ವಿದೇಶಿ ಉದ್ಯೋಗಿಯು ವಿಶೇಷ ಕೌಶಲ್ಯದ ಹುದ್ದೆಯಲ್ಲಿ ನೇಮಕಗೊಳಿಸಲಾಗಿದೆಯೆಂಬ ಬಗ್ಗೆ ಪುರಾವೆಗಳನ್ನು ಕೂಡಾ ಅದು ಸಲ್ಲಿಸೇಕಾಗುತ್ತದೆ.

 ಎಚ್1ಬಿ ವೀಸಾ ಪದ್ಧತಿಯ ಪ್ರಮುಖ ಫಲಾನುಭವಿಗಳಾಗಿರುವ ಭಾರತೀಯ ಐಟಿ ಕಂಪೆನಿಗಳು ತಮ್ಮ ಗಣನೀಯ ಸಂಖ್ಯೆಯ ಉದ್ಯೋಗಿಗಳನ್ನು ಅಮೆರಿಕದಲ್ಲಿರುವ ಮೂರನೆ ಕಂಪೆನಿಗಳಲ್ಲಿ ನಿರ್ದಿಷ್ಟ ಕೆಲಸ ಯೋಜನೆಗಳಿಗಾಗಿ ನಿಯೋಜಿಸುತ್ತಿವೆ. ಅಮೆರಿಕದ ಬ್ಯಾಂಕಿಂಗ್, ಪ್ರವಾಸ ಹಾಗೂ ವಾಣಿಜ್ಯ ಸೇವೆಗಳಲ್ಲಿ ಗಣನೀಯ ಸಂಖ್ಯೆಯ ಭಾರತೀಯರು ಎಚ್1ಬಿ ವೀಸಾದಡಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.

2019ರ ಸಾಲಿನ ಎಚ್1ಬಿ ವೀಸಾಗಾಗಿ ಅರ್ಜಿ ಸಲ್ಲಿಕೆ ಎಪ್ರಿಲ್ 2ರಿಂದ ಆರಂಭಗೊಳ್ಳಲಿದೆ.ಅದಕ್ಕಿಂತ ಮುಂಚಿತವಾಗಿ ಈ ನೂತನ ಮಾರ್ಗದರ್ಶಿ ಸೂತ್ರಗಳುನ್ನು ಜಾರಿಗೊಳಿಸಲಾಗಿದೆ. ಅಕ್ಟೋಬರ್‌ನಲ್ಲಿ ಎಚ್1ಬಿ ವೀಸಾ ವೀಸಾ ನೀಡಿಕೆ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಬಾಕ್ಸ್...

ಎಚ್1 ಬಿ ವೀಸಾ ಏನಿದು?

 ವಿಶೇಷ ಕೌಶಲ್ಯದ ಕ್ಷೇತ್ರಗಳಲ್ಲಿ ಉದ್ಯೋಗ ನಿರ್ವಹಿಸುವವರಿಗೆ ನೀಡಲಾಗುವ ಅಲ್ಪಾವಧಿಯ ವೀಸಾವನ್ನು ಎಚ್1ಬಿ ವೀಸಾ ಎಂದು ಕರೆಯಲಾಗುತ್ತದೆ. ಎಚ್1ಬಿ ವೀಸಾದ ಆಕಾಂಕ್ಷಿಗಳು ವಿಶೇಷ ಕೌಶಲ್ಯದ ಕ್ಷೇತ್ರಗಳಿಗೆ ಸಂಬಂಧಿಸಿ ಅನುಭವವನ್ನು ಹೊಂದಿರಬೇಕಾಗುತ್ತದೆ ಅಥವಾ ವಿಶೇಷ ಪದವಿಯನ್ನು ಪಡೆದಿರಬೇಕಾಗುತ್ತದೆ. ಪ್ರಸ್ತುತ ಪ್ರತಿ ವರ್ಷ ಸುಮಾರು 1.25 ಲಕ್ಷಕ್ಕೂ ಅಧಿಕ ಭಾರತೀಯರಿಗೆ ಎಚ್1ಬಿ ವೀಸಾ ಪಡೆಯುತ್ತಿದ್ದಾರೆ. 2016ರಲ್ಲಿ 1,26,692 ಮಂದಿ ಭಾರತೀಯರಿಗೆ ಎಚ್1 ಬಿ ವೀಸಾ ಲಭಿಸಿದೆ.ಆ ವರ್ಷವೇ ಚೀನಾದ 21,657 ಮಂದಿಗೆ ಈ ವೀಸಾ ಲಭಿಸಿದೆ. ಎಚ್‌ಬಿ ವೀಸಾ ಪಡೆಯುವವರಲ್ಲಿ ಶೇ. 68 ಮಂದಿ ಭಾರತೀಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News