‘ಬಂಡಲ್ ಷಾ’ ಪೋಸ್ಟ್: 15 ದಿನಗಳ ಕಾಲ ವಿದ್ಯಾರ್ಥಿ ಸಸ್ಪೆಂಡ್
ಪುತ್ತೂರು, ಫೆ. 23: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ‘ಬಂಡಲ್ ಷಾ’ ಎಂದು ಟೀಕಿಸಿದ ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು 15 ದಿನ ಸಸ್ಪೆಂಡ್ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡಲಾರಂಭಿಸಿದೆ. ಅಲ್ಲದೆ ಈ ಬಗ್ಗೆ ಹಲವಾರು ಪ್ರತಿಕ್ರಿಯೆಗಳು ಹೊರಬೀಳಲಾರಂಭಿಸಿದ್ದು, ಈ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಳೆದ ಮಂಗಳವಾರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯಕ್ರಮ ನಡೆದಿತ್ತು. ವಿವೇಕಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಯೊಬ್ಬ ‘ಬಂಡಲ್ ಷಾ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಹಿನ್ನೆಲೆಯಲ್ಲಿ ಕಾಲೇಜು ಆಡಳಿತ ಆ ವಿದ್ಯಾರ್ಥಿಯನ್ನು 15 ದಿನಗಳ ಕಾಲ ಸಸ್ಪೆಂಡ್ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಲಾರಂಭಿತ್ತು.
ವಿವೇಕಾನಂದ ಕಾನೂನು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಈ ರೀತಿಯ ಸಂದೇಶ ರವಾನಿಸಿರುವುದಾಗಿ ತಿಳಿದು ಬಂದಿದೆ.
ವಿದ್ಯಾರ್ಥಿಯನ್ನು 15 ದಿನಗಳ ಕಾಲ ಸಸ್ಪೆಂಡ್ ಮಾಡಿಲ್ಲ. ವಿದ್ಯಾರ್ಥಿಗಳ ನಡುವೆ ಇನ್ನಷ್ಟು ಗೊಂದಲ ಆಗುವುದು ಬೇಡ ಎಂಬ ಕಾರಣಕ್ಕಾಗಿ ಒಂದು ವಾರ ಕಾಲೇಜಿಗೆ ಬರುವುದು ಬೇಡ ಎಂದು ರಜೆಯಲ್ಲಿ ಕಳುಹಿಸಲಾಗಿದೆ ಎಂದು ಹೆಸರು ಉಲ್ಲೇಖಿಸ ಬಯಸದ ಕಾಲೇಜಿನ ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ.