ಹೊಸದಿಲ್ಲಿ: ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿದ ಸಚಿವ ಪ್ರಮೋದ್
ಉಡುಪಿ, ಫೆ.23: ಕೇಂದ್ರ ಸರಕಾರದಲ್ಲಿ ಬಾಕಿ ಇರುವ ರಾಜ್ಯ ಸರಕಾರದ ಮೀನುಗಾರಿಕೆ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಹೊಸದಿಲ್ಲಿಗೆ ತೆರಳಿದ ರಾಜ್ಯ ಮೀನುಗಾರಿಕಾ ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಬುಧವಾರ ಮತ್ತು ಗುರುವಾರಗಳಂದು ಸಂಬಂಧಪಟ್ಟ ಕೇಂದ್ರ ಸಚಿವರುಗಳು ಹಾಗೂ ಇಲಾಖಾ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ರಾಜ್ಯ ಪ್ರಸ್ತಾವನೆಗಳಿಗೆ ಶೀಘ್ರವಾಗಿ ಮಂಜೂರಾತಿ ನೀಡಿ ತ್ವರಿತವಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೆಸಿದರು.
ಮೀನುಗಾರಿಕೆ ಇಲಾಖೆಯ ಪ್ರಸ್ತಾವನೆಗಳಾದ ಮಂಗಳೂರು 3ನೇ ಹಂತ, ಹೊನ್ನಾವರ 2ನೇ ಹಂತದ ಮೀನುಗಾರಿಕಾ ಬಂದರುಗಳ ಅಭಿವೃದ್ಧಿ, ಅಮದಳ್ಳಿ ಮೀನುಗಾರಿಕೆ ಬಂದರಿನ ಆಧುನೀಕರಣ, ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಬ್ರೇಕ್‌ವಾಟರ್ ನಿರ್ಮಾಣ, ಮಂಗಳೂರು ಮೀನುಗಾರಿಕೆ ಬಂದರಿನ ಕಂಡತ್ತಪಳ್ಳಿ ಮತ್ತು ಮಲ್ಪೆ, ಬೆಲೇಕೇರಿ ಹಾಗೂ ಕೋಡಿಕನ್ಯಾನ ಮೀನುಗಾರಿಕೆ ಬಂದರಿನಲ್ಲಿ ಡ್ರಜ್ಜಿಂಗ್ ಇತ್ಯಾದಿಗಳ ಕುರಿತಂತೆ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಮತ್ತು ಕಾರ್ಯದರ್ಶಿಗಳಾದ ಎಸ್.ಕೆ. ಪಟ್ಟಾನಾಯಕ್ ಇವರೊಂದಿಗೆ ಚರ್ಚಿಸಿರುವುದಾಗಿ ಪ್ರಮೋದ್ ಪತ್ರಿಕೆಗಳಿಗೆ ಬಿಡುಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಬ್ರೇಕ್‌ವಾಟರ್ ನಿರ್ಮಾಣ ಕಾಮಗಾರಿ ಯೋಜನೆಗೆ ಕೇಂದ್ರ ಸರಕಾರದ ಪಾಲಿನ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವನೆಗೆ ಸಂಬಂಧಿಸಿದಂತೆ 20 ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡುವ ಬಗ್ಗೆ ಸಚಿವರು ಭರವೆ ನೀಡಿದ್ದಾರೆ ಎಂದವರು ಹೇಳಿದ್ದಾರೆ.
ಚಿತ್ರದುರ್ಗ, ಹೊಳೆನರಸೀಪುರ, ಉಡುಪಿ, ಹಾಸನ, ಹುಬ್ಬಳ್ಳಿ, ಶಿಕಾರಿಪುರ, ಕಾರ್ಕಳ ಮತ್ತು ಶಿರಾಳಕೊಪ್ಪಗಳಲ್ಲಿ ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಲು ಕೋರಿ ಸಲ್ಲಿಸಿರುವ ರಾಜ್ಯದ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕರ್ನಲ್ ರಾಜ್ಯವರ್ಧನ್‌ಸಿಂಗ್ ರಾಥೋರ್ ಮತ್ತು ಕಾರ್ಯದರ್ಶಿ ರಾಹುಲ್ ಭಟ್ನಾಗರ್‌ರನ್ನು ಭೇಟಿ ಮಾಡಿ ಚರ್ಚಿಸಿದ್ದು, ತಮ್ಮ ಪ್ರಸ್ತಾವನೆಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಆವಶ್ಯಕ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದೂ ಪ್ರಮೋದ್ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.