×
Ad

‘ಯುವಜನಾಂಗಕ್ಕೆ ತುಳು ಸಂಸ್ಕೃತಿ ಕಟ್ಟಿಕೊಡುವ ಕೆಲಸವಾಗಲಿ’

Update: 2018-02-23 22:44 IST

ಉಡುಪಿ, ಫೆ.23: ಆಧುನಿಕತೆ ಹಾಗೂ ಆಧುನಿಕ ತಂತ್ರಜ್ಞಾನದ ಹಿಂದೆ ಬಿದ್ದಿರುವ ಇಂದಿನ ಯುವಜನತೆಯಲ್ಲಿ ತುಳು ಸಂಸ್ಕೃತಿ, ಪರಂಪರೆಯನ್ನು ಕಟ್ಟಿ ಕೊಡುವ ಕಾರ್ಯಕ್ರಮಗಳನ್ನು ಆಯೋಜಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದು ಹಾವೇರಿಯ ಕರ್ನಾಟಕ ಜಾನಪದ ವಿವಿಯ ವಿಶ್ರಾಂತ ಕುಲಪತಿ ಹಾಗೂ ಜಾನಪದ ವಿದ್ವಾಂಸ ಡಾ.ಚಿನ್ನಪ್ಪ ಗೌಡ ಹೇಳಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಎಂಜಿಎಂ ಕಾಏಜಿನ ತುಳುಸಂಘದ ಜಂಟಿ ಆಶ್ರಯದಲ್ಲಿ ಕಾಲೇಜಿನ ಮುದ್ದಣಮಂಟಪದಲ್ಲಿ ಶುಕ್ರವಾರ ನಡೆದ ತುಳು ಸಂಸ್ಕೃತಿ ಹಬ್ಬ ‘ತುಳು ಐಸಿರಿ- 2018’ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಇಂದಿನ ಯುವಜನಾಂಗ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಅವಲೋ ಕಿಸುತ್ತಿಲ್ಲ. ಬೇರು ಗಟ್ಟಿಯಿಲ್ಲದ ಕನಸುಗಳು ನಮ್ಮ ವಿದ್ಯಾರ್ಥಿಗಳನ್ನು ಆವರಿಸಿ ಕೊಂಡಿವೆ. ಇವರಲ್ಲಿ ತುಳುವರ ಆರಾಧನಾ ಪರಂಪರೆ, ಸಿರಿ ಪಾಡ್ದನ, ಭೂತಾರಾಧನೆ, ನಾಗರಾಧನೆ, ಯಕ್ಷಗಾನ, ಕಂಬಳ, ತುಳುವರ ಆಹಾರ ಪದ್ಧತಿಗಳ ಕುರಿತಂತೆ ಅರಿವು ಮೂಡಿಸಬೇಕು. ಆಗಷ್ಟೇ ಅವರಲ್ಲಿ ತುಳು ಸಂಸ್ಕೃತಿಯ ಕುರಿತಂತೆ ಒಲವು ಬೆಳೆಯಲು ಸಾಧ್ಯವಿದೆ ಎಂದರು.

ನಾಲ್ಕೈದು ದಶಕಗಳ ಹಿಂದೆ ಶಾಲಾ-ಕಾಲೇಜುಗಳಲ್ಲಿ ತುಳು ಭಾಷೆಯನ್ನು ಕದ್ದುಮುಚ್ಚಿ ಮಾತನಾಡಬೇಕಿತ್ತು. ಆದರೆ ಇಂದು ಕಾಲೇಜೊಂದರಲ್ಲಿ ತುಳು ಐಸಿರಿಯಂಥ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಆದರೂ ತುಳು ಸಂಸ್ಕೃತಿ, ಪರಂಪರೆ ನಿಧಾನವಾಗಿ ಮರೆಯಾಗುತ್ತಿದೆ ಎಂದು ವಿಷಾಧಿಸಿದ ಡಾ.ಗೌಡ, ವೇಗವಾಗಿ ಧಾವಂತದಿಂದ ಮುಂದೆ ಸಾಗುತ್ತಿರುವ ಯುವಜನಾಂಗ ಸ್ವಲ್ಪ ನಿಂತು, ಹಿಂದಿರುಗಿ ನೋಡಿದರೆ ಅಲ್ಲಿ ನಮ್ಮ ಹಿರಿಯರು ಬಿಟ್ಟು ಹೋದ ನಮ್ಮ ಪರಂಪರೆ ಕಾಣಿಸುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ವೈ.ಎನ್.ಶೆಟ್ಟಿ ಮಾತನಾಡಿ, ಹಿಂದಿನಿಂದಲೂ ಪಂಚದ್ರಾವಿಡ ಭಾಷೆಗಳಲ್ಲಿ ತುಳುವಿಗೆ ಅಗ್ರಸ್ಥಾನವಿತ್ತು. ತುಳುವಿಗೆ ಪ್ರಬುದ್ಧವಾದ ಲಿಪಿ ಇದೆ ಎಂಬುದನ್ನು ಸಂಶೋಧಕ ವೆಂಕಟರಾಜ ಪುಣಿಚಿತ್ತಾಯ ಕಂಡುಹಿಡಿದಿದ್ದಾರೆ. ಹೀಗಾಗಿ ತುಳು ಸಶಕ್ತ ಭಾಷೆ ಎಂಬ ಬಗ್ಗೆ ಸಂದೇಹವೇ ಇಲ್ಲ ಎಂದರು.

ಇಂಥ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಇನ್ನೂ ಗಂಭೀರ ಚಿಂತನೆ ನಡೆಯುತ್ತಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದ ಡಾ.ಶೆಟ್ಟಿ, ತುಳುವರ ಆಹಾರ ಪದ್ಧತಿಯನ್ನು ಅವಲೋಕಿಸಿದರೆ ಅದರಲ್ಲಿ ಔಷಧೀಯ ಗುಣವಿರುವುದನ್ನು ಕಾಣಬಹುದು. ಆದರೆ ‘ಆಟಿಡೊಂಜಿ ಕೂಟ’ ಹೆಸರಿನಲ್ಲಿ ನಾವು ಒಂದೇ ದಿನ ಪೈಪೋಟಿಯಲ್ಲಿ 50-100 ಆಹಾರ ಪದಾರ್ಥಗಳನ್ನು ಒಟ್ಟಿಗೆ ತಿಂದು ಅವುಗಳನ್ನು ವ್ಯರ್ಥಗೊಳಿಸುತಿದ್ದೇವೆ ಎಂದರು.

ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ತುಳುಕೂಟ ಉಡುಪಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಆರ್. ನಂಬಿಯಾರ್ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. 

ಎಂಜಿಎಂ ಕಾಲೇಜಿನ ತುಳುಸಂಘದ ಸಂಚಾಲಕ ಡಾ.ಪುತ್ತಿ ವಸಂತಕುಮಾರ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಕಾರ್ಯದರ್ಶಿ ಪುನರ್ವಸು ನಾಗೇಶ್ ವಂದಿಸಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News