×
Ad

ಮಂಗಳೂರು: ತ್ರಿವಳಿ ತಲಾಖ್ ಕುರಿತ ಮಸೂದೆ ಕೈಬಿಡಲು ಆಗ್ರಹಿಸಿ ಎಸ್‌ಡಿಪಿಐ ಧರಣಿ

Update: 2018-02-23 22:51 IST

ಮಂಗಳೂರು, ಫೆ.23: ಕೇಂದ್ರ ಸರಕಾರ ಜಾರಿಗೊಳಿಸಲುದ್ದೇಶಿಸಿರುವ ತ್ರಿವಳಿ ತಲಾಖೆ ಕುರಿತ ಮಸೂದೆಯನ್ನು ಕೂಡಲೇ ಕೈಬಿಡಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಶನಿವಾರ ನಗರದ ಪುರಭವನದು ಎದುರು ಹಮ್ಮಿಕೊಂಡ ಧರಣಿಯಲ್ಲಿ ಒತ್ತಾಯಿಸಿದೆ.

ಧರಣಿ ನಿರತರನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಅವರು, ಕೇಂದ್ರ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರಕಾರ ತ್ರಿವಳಿ ತಲಾಖ್‌ಗೆ ಸಂಬಂಧಿಸಿ ಮುಸ್ಲಿಂ ಸಂಘಟನೆಗಳೊಂದಿಗೆ ಸಮಾಲೋಚಿಸದೆ. ಕಾನೂನು ತಜ್ಞರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯದೇ ನೇರವಾಗಿ ಮಸೂದೆಯನ್ನು ಪ್ರಸ್ತುತಪಡಿಸಿದೆ. ಈ ಮಸೂದೆಯು ಮುಸ್ಲಿಂ ಮಹಿಳೆಯರಿಗೆ ಯಾವ ರೀತಿಯಲ್ಲೂ ಪ್ರಯೋಜನವಾಗುವುದಿಲ್ಲ. ಈ ಮಸೂದೆಯ ಮುಸ್ಲಿಂ ಮಹಿಳೆಯರ ನ್ಯಾಯ ಸ್ವಾತಂತ್ರ ಮತ್ತು ನ್ಯಾಯ ರಕ್ಷಣೆಗೆ ಮಾರಕವಾಗಿದೆ ಎಂದರು.

ದೇಶದಲ್ಲಿ ಮುಸ್ಲಿಮರಲ್ಲಿ ವಿಚ್ಛೇದನ ಹಾಗೂ ತೊರೆಯುವ ಪ್ರಮಾಣವು ಇತರ ಸಮುದಾಯಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಈ ಪ್ರಮಾಣವು ಹಿಂದೂಗಳಲ್ಲಿ ಶೇ. 77. 58 ಇದ್ದರೆ. ಕ್ರೈಸ್ತರಲ್ಲಿ ಶೇ. 21.3 ಹಾಗೂ ಮುಸ್ಲಿಮರಲ್ಲಿ ಶೇ. 5.77 ಪ್ರಮಾಣದಲ್ಲಿದೆ. ಈ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇವಲ ಮುಸ್ಲಿಮರನ್ನೇ ಗುರಿಯಾಗಿಸಿ ಮಸೂದೆ ಮಂಡಿಸಲು ಹೊರಟಿರುವುದು ಹಾಸ್ಯಾಂಸ್ಪದವಾಗಿದೆ. ಸರಕಾರದ ಈ ಕ್ರಮವು ಹಿಂದೂಗಳನ್ನು ತೃಪ್ತಿಪಡಿಸಲು ಹಾಗೂ ಮುಸ್ಲಿಮರನ್ನು ದಮನಿಸಲು ಪ್ರಯೋಗಿಸಿದ ಹೊಸ ಅಸ್ತ್ರವಾಗಿದೆ ಎಂದು ಆರೋಪಿಸಿದರು.

ವಿಮೆನ್ಸ್ ಇಂಡಿಯಾ ಮೂವ್‌ಮೆಂಟ್‌ನ ದ.ಕ. ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿ, ಕೇಂದ್ರ ಸರಕಾರ ತಲಾಖ್ ವಿಷಯದಲ್ಲಿ ಮೂಗು ತೂರಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ. ಇಸ್ಲಾಮಿನ ಪ್ರಕಾರ ತಮ್ಮ ಗಂಡಂದಿರಿಂದ ಹೇಗೆ ವಿಚ್ಛೇದನ ಪಡೆಯಬೇಕೆಂದು ಮುಸ್ಲಿಂ ಮಹಿಳೆಯವರು ಗೊತ್ತಿದೆ. ಇದು ಮಹಿಳೆಯರ ಬಗ್ಗೆ ಪ್ರಧಾನಿಯವರ ಮೊಸಳೆ ಕಣ್ಣೀರು ಆಗಿದೆ. ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಸ್ಲಿಂ ಮಹಿಳೆಯರ ಬಗ್ಗೆ ಕಾಳಜಿ, ಅನುಕಂಪ ಇದ್ದರೆ, ಅವರೇ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ 2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯಲ್ಲಿ ನೂರಾರು ಮಹಿಳೆಯರು ಮತ್ತು ಮಕ್ಕಳನ್ನು ಜೀವಂತವಾಗಿ ದಹಿಸಿದವರ ಬಗ್ಗೆ ಅನುಕಂಪ ತೋರಲಿ. ಕೋರ್ಟ್, ಕಚೇರಿಗಳ ಅಲೆದಾಟ ನಡೆಸುತ್ತಿರುವ ಸಂತ್ರಸ್ತೆಯರಿಗೆ ಸಹಕಾರ ನೀಡಲಿ ಎಂದು ಸವಾಲು ಹಾಕಿದರು.

ಪ್ರಧಾನಿಯವರು ಮುಸ್ಲಿಂ ಮಹಿಳೆಯರ ಅಭಿವೃದ್ಧಿ ಬಯಸುವುದಾಗಿ ಅವರಿಗಾಗಿ ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲಿ, ಆರೋಗ್ಯದ ಬಗ್ಗೆ ಸ್ಥಿರತೆ ನೀಡಲಿ. ಮುಸ್ಲಿಂ ಮಹಿಳೆಯರ ಅಹವಾಲುಗಳನ್ನು ಸ್ವೀಕರಿಸಲು ಪ್ರತಿನಿಧಿಯೊಬ್ಬರ ನೇಮಕ ಮಾಡಲಿ ಎಂದು ನಸ್ರಿಯಾ ಬೆಳ್ಳಾರೆ ಒತ್ತಾಯಿಸಿದರು.

ನ್ಯಾಷನಲ್ ವುಮನ್ಸ್ ಫ್ರಂಟ್‌ನ ಜಿಲ್ಲಾಧ್ಯಕ್ಷೆ ಝೀನತ್ ಫಿರೋಝ್ ಮಾತನಾಡಿ, ತ್ರಿವಳಿ ತಲಾಖ್ ಕುರಿತ ಮಸೂದೆಗೆ ಸಂಬಂಧಿಸಿ ಕೇಂದ್ರ ಸರಕಾರ ಸಮಸ್ಯೆಯೇ ಇಲ್ಲದ್ದನ್ನು ದೊಡ್ಡ ಸಮಸ್ಯೆಯನ್ನಾಗಿ ಬಿಂಬಿಸಲು ಹೊರಟಿದೆ. ದೇಶದಲ್ಲಿ ಮಹಿಳೆಯರಲ್ಲಿ ಪರಿಹಾರ ಕಾಣದ ಹಲವು ಸಮಸ್ಯೆಗಳಿವೆ. ಅವುಗಳನ್ನು ಮರೆಮಾಚಲು ಹಾಗೂ ದೇಶದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ರೂಪಿಸಿದ ತಂತ್ರವಾಗಿದೆ ಎಂದರು.

ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅತಾವುಲ್ಲಾ ಜೋಕಟ್ಟೆ, ಅಡ್ವಕೇಟ್ ಮಜೀದ್ ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಮಾತನಾಡಿದರು. ಕಾರ್ಪೊರೇಟರ್ ಅಯಾಝ್, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಆನಂದ ಮಿತ್ತಬೈಲ್, ನೌಫಲ್, ಜಲೀಲ್ ಕೃಷ್ಣಾಪುರ, ಅಶ್ರಫ್ ಮಂಚಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News