ಕಡಬ: ಮನೆಗೆ ನುಗ್ಗಿ ನಗ-ನಗದು ಕಳವು; ದೂರು
Update: 2018-02-23 22:53 IST
ಕಡಬ, ಫೆ.23. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯೊಳಗೆ ನುಗ್ಗಿರುವ ಕಳ್ಳರು ಲಕ್ಷಾಂತರ ಮೌಲ್ಯದ ನಗ, ನಗದನ್ನು ದೋಚಿರುವ ಘಟನೆ ಠಾಣಾ ವ್ಯಾಪ್ತಿಯ ಕೇಪು ಎಂಬಲ್ಲಿ ಶುಕ್ರವಾರದಂದು ಬೆಳಕಿಗೆ ಬಂದಿದೆ.
ಕುಟ್ರುಪ್ಪಾಡಿ ಗ್ರಾಮದ ಕೇಪು ನಿವಾಸಿ ಹಾರೂನ್ ಸಾಹೇಬ್ ಎಂಬವರ ಮನೆಯಲ್ಲಿ ಕಳೆದ ಕೆಲ ದಿನಗಳಿಂದ ಯಾರೂ ಇಲ್ಲದೆ ಇದ್ದುದನ್ನು ಅರಿತ ಕಳ್ಳರು ಮನೆಯೊಳಗಿನ ಕಪಾಟಿನಲ್ಲಿಟ್ಟಿದ್ದ 45 ಸಾವಿರ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 3 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗುರುವಾರ ನೆಕ್ಕಿತ್ತಡ್ಕದಲ್ಲಿ ಉರೂಸ್ ಸಮಾರಂಭವಿದ್ದ ಕಾರಣ ಮನೆಮಂದಿ ಅಲ್ಲಿಗೆ ತೆರಳಿರುವ ಬಗ್ಗೆ ಅರಿತವರೇ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಕಡಬ ಠಾಣಾ ಉಪ ನಿರೀಕ್ಷಕರಾದ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿಗಳು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.