ಸಾಮಾಜಿಕ ವಿಭಜನೆಯಿಂದ ಹೂಡಿಕೆಗೆ ಹಿನ್ನಡೆ: ಅರುಣ್‌ಜೇಟ್ಲಿ
ಲಕ್ನೋ,ಫೆ.23: ಸಾಮಾಜಿಕ ವಿಭಜನೆಯು ರಾಜ್ಯಗಳಲ್ಲಿ ಹೂಡಿಕೆಗೆ ಹಿನ್ನಡೆ ಯನ್ನುಂಟು ಮಾಡುತ್ತದೆಯೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರತಿಪಾದಿಸಿದ್ದಾರೆ. ಲಕ್ನೋದಲ್ಲಿ ಗುರುವಾರ ನಡೆದ ಉತ್ತರಪ್ರದೇಶ ಹೂಡಿಕೆದಾರರ ಶೃಂಗಸಭೆಯ ಸಮಾರೋಪ ಭಾಷಣ ಮಾಡುತ್ತಿದ್ದ ಅವರು ಉತ್ತರಪ್ರದೇಶದಲ್ಲಿ ಈ ಹಿಂದೆ ಇದ್ದಂತೆ, ಸಾಮಾಜಿಕವಾಗಿ ವಿಭಜಿತವಾಗಿರುವ ರಾಜ್ಯಗಳಲ್ಲಿ ಹೂಡಿಕೆಯ ಚಕ್ರವು ತಿರುಗಲಾರದು ಎಂದರು.
ಉತ್ತರಪ್ರದೇಶ ಹೂಡಿಕೆದಾರರ ಶೃಂಗಸಭೆಯ ರಾಜ್ಯದ ಪ್ರಗತಿಯ ಕಾರ್ಯಸೂಚಿಯನ್ನು ರೂಪಿಸುವ ಅತಿ ದೊಡ್ಡ ಪ್ರಯತ್ನವಾಗಿದೆಯೆಂದು ಹೇಳಿದ್ದಾರೆ.
‘‘ ಸಮಾಜವನ್ನು ವಿಭಜಿಸುವ ರಾಜಕೀಯ ಕಾರ್ಯಸೂಚಿಯೊಂದಿಗೆ ಒಂದು ರಾಜ್ಯ ಹಾಗೂ ಸಮಾಜವು ಸಾಗುತ್ತಿದ್ದರೆ ಅಲ್ಲಿ ಹೂಡಿಕೆಯ ಚಕ್ರವು ಆರಂಭವಾಗಲು ಸಾಧ್ಯವಿಲ್ಲ. ದುರದೃಷ್ಟವಶಾತ್ ಈ ಹಿಂದೆ ಉತ್ತರಪ್ರದೇಶದಲ್ಲಿ ಇಂತಹ ವಾತಾವರಣವಿದ್ದುದರಿಂದ ಅಲ್ಲಿ ಹೂಡಿಕೆಯ ಚಕ್ರವು ಆರಂಭವಾಗಿರಲಿಲ್ಲ. ಒಂದು ಹೂಡಿಕೆಯಾಗುತ್ತಿದ್ದರೂ, ಅದರಿಂದ ಸಹಜ ಪ್ರಯೋಜನಗಳು ಲಭ್ಯವಾಗು ತ್ತಿರಲಿಲ್ಲವೆಂದು ಅವರು ಹೇಳಿದ್ದಾರೆ. ಸರಕಾರಗಳು ಹಾಗೂ ಮುಖ್ಯಮಂತ್ರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಯಾವುದೇ ನಾಯಕತ್ವವು ಅದರ ಕೆಲಸಗಳಿಂದಾಗಿ ಸ್ಮರಿಸಲ್ಪಡುತ್ತದೆಯೆಂದು ಜೇಟ್ಲಿ ಅಭಿಪ್ರಾಯಿಸಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ, ಈ ಸರಕಾರವು ನೂತನ ಇತಿಹಾಸವೊಂದನ್ನು ಬರೆಯಲು ಯತ್ನಿಸುತ್ತಿದೆಯೆಂದವರು ಹೇಳಿದರು.
ತನ್ನ ಭಾಷಣದಲ್ಲಿ ಆದಿತ್ಯನಾಥ್ ಸರಕಾರದ ಗುಣಗಾನ ಮಾಡಿದ ಅವರು ಕಳೆದ 11 ತಿಂಗಳುಗಳಲ್ಲಿ ಉತ್ತರಪ್ರದೇಶದಲ್ಲಿ ಕಾನೂನಿನ ಪ್ರಭುತ್ವ ಸ್ಥಾಪಿಸಲ್ಪಟ್ಟಿದೆ ಎಂದರು.