ಶ್ರದ್ಧೆಯಿಂದ ಮಾತ್ರ ಕಲಾವಿದ ಬೆಳೆಯಲು ಸಾಧ್ಯ: ದಿಲೀಪ್ ರಾನಡೆ
ಉಡುಪಿ, ಫೆ.24: ಕಲಾವಿದನೊಬ್ಬ ತೀವ್ರವಾದ ಶ್ರದ್ಧೆಯಿಂದ ಕೆಲಸ ಮಾಡಿದಾಗ ಮಾತ್ರ ಬೆಳೆಯಲು ಸಾಧ್ಯ ಎಂದು ಹಿರಿಯ ಕಲಾವಿದ ಹಾಗೂ ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದ ಆಧುನಿಕ ಕಲೆಗಳ ವಿಭಾಗದ ನಿವೃತ್ತ ನಿರ್ದೇಶಕ ದಿಲೀಪ್ ರಾನಡೆ ಹೇಳಿದ್ದಾರೆ.
ಕಲಾವಿದ ತಲ್ಲೂರು ಎಲ್.ಎನ್. ಅವರ ಕುರಿತ ಪುಸ್ತಕವನ್ನು ಶುಕ್ರವಾರ ಮಣಿಪಾಲದ ಖಾಸಗಿ ಹೊಟೇಲಿನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು. ಕಲಾವಿದ ತಲ್ಲೂರು ಎಲ್.ಎನ್. ಕಲೆಯನ್ನೇ ಬದುಕಾಗಿಸಿಕೊಂಡದ್ದರಿಂದಾಗಿ ಅವರು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದರು.
ನಾಡೋಜ ಕೆ.ಪಿ.ರಾವ್ ಮಾತನಾಡಿ, ಇತರರ ಯೋಚನೆಗಳನ್ನು ಕೇಳುವ ಕಿವಿ ಹಾಗೂ ಅದನ್ನು ಗ್ರಹಿಸುವ ಎಳೆಯರ ಉತ್ಸಾಹ ಎರಡೂ ಕೂಡ ತಲ್ಲೂರು ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ತಿಳಿಸಿದರು.
ಮಣಿಪಾಲ್ ಬಳಗದ ವನಿತಾ ಪೈ ಮಾತನಾಡಿ, ತಲ್ಲೂರು ಕಲಾವಿದರಾಗಿ ಗಮನದಲ್ಲಿರಿಸಿಕೊಳ್ಳಬೇಕಾದ ದೇಶದ ಮೂರು ನಾಲ್ಕು ಮಂದಿಯಲ್ಲಿ ಒಬ್ಬರೆಂದು ಕಲೋದ್ಯಮದ ಸಮೀಕ್ಷೆಗಳು ಗುರುತಿಸಿವೆ. ಅಂತಹ ಕಲಾವಿದ ಈ ಭಾಗದವರಾಗಿರುವುದು ಮತ್ತು ಅವರು ಮಣಿಪಾಲ ಬಳಗದ ಹಿರಿಯ ಉಪೇಂದ್ರ ಪೈ ಅವರ ಸ್ಮಾರಕ ವೃತ್ತವನ್ನು ವಿನ್ಯಾಸ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಬೆಂಗಳೂರಿನ ಕಲಾ ವಿಮರ್ಶಕ ಗಿರಿಧರ ಖಾಸನೀಸ್, ಛಾಯಾಗ್ರಾಹಕ ಮಲ್ಲಿಕಾರ್ಜುನ ಕಟಕೋಳ, ಕಲಾವಿದೆ ಶಾಂತಾಮಣಿ, ಇಂಗ್ಲಂಡಿನ ಕ್ಯುರೇಟರ್ ಮೇರಿ ಜಾರ್ಜ್, ಮುಂಬಯಿಯ ಕಲಾವಿದ ಭುವನೇಶ್, ಪತ್ರಕರ್ತ ಸತೀಶ್ ಚಪ್ಪರಿಕೆ, ಉಡುಪಿ ಜಂಗಮ ಮಠದ ಡಾ. ಯು.ಸಿ.ನಿರಂಜನ, ಗ್ಯಾಲರಿಸ್ಟ್ ಡಾ.ಕಿರಣ ಆಚಾರ್ಯ, ಹಿರಿಯ ಕಲಾವಿದ ರಮೇಶ್ ರಾವ್, ಕಲಾವಿದರಾದ ಸಕುಪಾಂಗಾಳ, ಪುರುಷೋತ್ತಮ ಅಡ್ವೆ, ರಾಜೇಂದ್ರ ಕೇದಗೆ, ಕುಸುಮಾಧರ ಸೋನ ಸೇರಿದಂತೆ ಅವಿಭಜಿತ ದ.ಕ. ಜಿಲ್ಲೆಗಳ ಹಲವು ಮಂದಿ ಕಲಾವಿದರು, ಕಲಾಸಕ್ತರು ಪಾಲ್ಗೊಂಡಿದ್ದರು.
ತಲ್ಲೂರು ಎಲ್.ಎನ್. ಪುಸ್ತಕವನ್ನು ಪತ್ರಕರ್ತ ರಾಜಾರಾಂ ತಲ್ಲೂರು ಸಂಪಾ ದಿಸಿದ್ದು, ಅದರಲ್ಲಿ ಹರ್ಷ್ ಫಾಯ್, ಪೀಟರ್ ನ್ಯಾಗಿ, ಡಾ.ಹೊಲ್ಲಿ ಷಾಫರ್ ಮತ್ತಿತರ ಹಿರಿಯ ಕಲಾವಿಮರ್ಶಕರ ಲೇಖನಗಳು ಹಾಗೂ ತಲ್ಲೂರು ಎಲ್.ಎನ್. ಆರ್ಥಿಕತೆ ವಿಷಯದಲ್ಲಿ ರಚಿಸಿದ ಕಲಾಕೃತಿಗಳ ಚಿತ್ರಗಳು ಇವೆ.