ದುಬಾರಿ ಚುಂಬನ : ರಿಯಾಲಿಟಿ ಶೋ ತೀರ್ಪುಗಾರ ಹುದ್ದೆಯಿಂದ ಪಪೋನ್ ಔಟ್
ಮುಂಬೈ,ಫೆ.24: ರಿಯಾಲಿಟಿ ಶೋನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಚುಂಬಿಸಿದ ಬಗ್ಗೆ ಬಾಲಿವುಡ್ ಗಾಯಕ ಪಪೋನ್ ವಿರುದ್ಧ ಸುಪ್ರೀಂಕೋರ್ಟ್ ವಕೀಲ ರುನಾ ಭಾಯನ್ ದೂರು ನೀಡಿದ ಹಿನ್ನೆಲೆಯಲ್ಲಿ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿರುವ ಗಾಯಕ, ಈ ರಿಯಾಲಿಟಿ ಶೋ ತೀರ್ಪುಗಾರ ಹುದ್ದೆಯಿಂದ ಕೆಳಕ್ಕಿಳಿದಿದ್ದಾರೆ.
ಹೋಳಿ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿ ಪಪೋನ್ ಹಾಗೂ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಕೆಲ ಮಕ್ಕಳು ಫೇಸ್‍ಬುಕ್ ಲೈವ್ ವೀಡಿಯೊ ಮೂಲಕ ಅಭಿಮಾನಿಗಳ ಜತೆ ಸಂವಾದ ನಡೆಸುತ್ತಿದ್ದರು. ಆಗ ಪಪೋನ್ ಬಾಲಕಿಯೊಬ್ಬಳಿಗೆ ಚುಂಬಿಸಿದ್ದು ನೇರಪ್ರಸಾರವಾಗಿ ವಿವಾದ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಶೋ ದಿಂದ ಹಿಂದೆ ಸರಿಯಲು ಪಪೋನ್ ನಿರ್ಧರಿಸಿದ್ದಾರೆ.
"ನನ್ನ ವೃತ್ತಿಪರ ಬದ್ಧತೆಗಳನ್ನು ಈಡೇರಿಸುವ ಮನಸ್ಥಿತಿಯಲ್ಲಿ ನಾನು ಇಲ್ಲ. ನನ್ನನ್ನು ತಪ್ಪಾಗಿ ಸಿಕ್ಕಿಸಿಹಾಕಿರುವ ಈ ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೂ ಈ ಶೋನಲ್ಲಿ ತೀರ್ಪುಗಾರನಾಗಿ ನಾನು ಕಾರ್ಯ ನಿರ್ವಹಿಸುತ್ತಿಲ್ಲ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದ್ದು, ಅಂತಿಮವಾಗಿ ಸತ್ಯವಷ್ಟೇ ಉಳಿಯುತ್ತದೆ. ಈ ಮಧ್ಯಂತರದಲ್ಲಿ, ನನ್ನ ಖಾಸಗಿತನವನ್ನು ಗೌರವಿಸುವುದನ್ನು ನಾನು ಬಯಸುತ್ತೇನೆ" ಎಂದು ಫೇಸ್‍ಬುಕ್ ಪೇಜ್‍ನಲ್ಲಿ ಹೇಳಿಕೆ ಶೇರ್ ಮಾಡಿದ್ದಾರೆ.
ಚಾನಲ್ ಕೂಡಾ ಶನಿವಾರ ಸಂಜೆ ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದೆ. ವಿವಾದ ಮುಗಿಯುವವರೆಗೂ ಪಪೋನ್ ಯಾವುದೇ ಶೂಟಿಂಗ್‍ನಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಚಾನಲ್ ಮತ್ತು ಪಪೋನ್ ನಡುವೆ ಸುಧೀರ್ಘ ಮಾತುಕತೆ ನಡೆದ ಬಳಿಕ ಈ ನಿರ್ಧಾರ ಪ್ರಕಟವಾಗಿದೆ ಎಂದು ಆಪ್ತ ಮೂಲಗಳು ಹೇಳಿವೆ.