ಅಕ್ರಮ ಕಟ್ಟಡ: ಉಡುಪಿ ನಗರಸಭೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು
ಉಡುಪಿ, ಫೆ.24: ನೀಲಿ ನಕಾಶೆ ಹಾಗೂ ಪರವಾನಿಗೆಗೆ ಸಂಪೂರ್ಣ ವ್ಯತಿರಿಕ್ತವಾಗಿ ನಿರ್ಮಾಣ ಮಾಡಿದ ಕಟ್ಟಡಕ್ಕೆ ವಾಸ್ತವ್ಯದ ಪ್ರಮಾಣ ಪತ್ರವನ್ನು ನೀಡಿದ ಉಡುಪಿ ನಗರಸಭೆ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಅಕ್ರಮ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಕರಂಬಳ್ಳಿಯ ಸಮಾಜ ಸೇವಕ ಮುಹಮ್ಮದ್ ಹನೀಫ್ ಕರ್ನಾಟಕ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಹಮ್ಮದ್ ಹನೀಫ್, ಈ ವಿಚಾರದಲ್ಲಿ ಫೆ. 2ರಂದು ಹಿಂದಿನ ಪೌರಾಯುಕ್ತ ಗೋಕುಲ್ ದಾಸ್ ನಾಯಕ್, ಕಂದಾಯ ಅಧಿಕಾರಿ ಚಂದ್ರ ಪೂಜಾರಿ ಹಾಗೂ ಈಗಿನ ಪೌರಾಯುಕ್ತ ಡಿ.ಮಂಜುನಾಥಯ್ಯ ವಿರುದ್ಧ ನೀಡಿರುವ ದೂರು ಲೋಕಾಯುಕ್ತ ದಾಖಲಿಸಿಕೊಂಡಿದೆ. ಇದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಲಾಗಿದೆ ಎಂದರು.
ಕರಂಬಳ್ಳಿ ವಾರ್ಡ್‌ನ ಎಚ್.ಉಮೇಶ್ಚಂದ್ರ ಹೆಗ್ಡೆ ನಗರಸಭೆ ನೀಡಿರುವ ನೀಲಿ ನಕಾಶೆ ಹಾಗೂ ಪರವಾನಿಗೆಯಂತೆ ಕಟ್ಟಡವನ್ನು ನಿರ್ಮಿಸದೆ ಅದಕ್ಕೆ ವ್ಯತಿರಿಕ್ತ ವಾಗಿ ನಿರ್ಮಿಸಿದ್ದರು. ಆದರೆ ಅಧಿಕಾರಿಗಳು ಇದನ್ನು ಉಲ್ಲೇಖ ಮಾಡದೆ ವಾಸ್ತವ್ಯ ದೃಢೀಕರಣ ಪ್ರಮಾಣ ಪತ್ರವನ್ನು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕಿನಡಿಯಲ್ಲಿ ದಾಖಲೆಗಳನ್ನು ಪಡೆದು ನಗರಸಭೆಗೆ ದೂರು ಅರ್ಜಿಯನ್ನು ಸಲ್ಲಿಸಲಾಗಿದೆ. ಅದರಂತೆ ಪೌರಾಯುಕ್ತರು ಕಟ್ಟಡ ಮಾಲಕರಿಗೆ ನೋಟೀಸು ಜಾರಿ ಮಾಡಿದ್ದರು. ಆದರೆ ಪೌರಾಯುಕ್ತ ಮಂಜುನಾಥಯ್ಯ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ದೂರು ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿ ಹಿಂಬರಹ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಆದುದರಿಂದ ಈ ಪ್ರಕರಣವನ್ನು ವಿಚಾರಣೆ ನಡೆಸಿ, ವಸತಿ ಸಮುಚ್ಛಯ ದಂತಹ ಕಟ್ಟಡ ನಿರ್ಮಾಣಗಾರರ ಪರವಾಗಿ ನಿಂತು ದುರ್ಬಲ ಜನರಿಗೆ ತೀವ್ರ ತೊಂದರೆ ನೀಡುವ ನಗರಸಭೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕು. ಈ ಅಕ್ರಮ ಕಟ್ಟಡವನ್ನು ತೆರವುಗೊಳಿಸಬೇಕೆಂದು ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ ಎಂದು ಮುಹಮ್ಮದ್ ಹನೀಫ್ ಹೇಳಿದರು.