ಆದಿವಾಸಿ ಯುವಕನ ಹತ್ಯೆ ಪ್ರಕರಣ: ಎಂಟು ಜನರ ವಿರುದ್ಧ ಕೊಲೆ ಆರೋಪ

Update: 2018-02-24 15:35 GMT

ತಿರುವನಂತಪುರ,ಫೆ.24: ಪಾಲಕ್ಕಾಡ್ ಜಿಲ್ಲೆಯ ಮನ್ನಾರಕೂದ್ ತಾಲೂಕಿನ ಅಟ್ಟಪಾಡಿಯಲ್ಲಿ ಗುರುವಾರ ರಾತ್ರಿ ಗುಂಪೊಂದು ಕಳ್ಳತನದ ಆರೋಪದಲ್ಲಿ ಬುಡಕಟ್ಟು ಯುವಕನೋರ್ವನನ್ನ್ನು ಥಳಿಸಿ ಕೊಂದ ಘಟನೆಗೆ ಸಂಬಂಧಿಸಿದಂತೆ ಕೇರಳ ಪೊಲೀಸರು ಎಂಟು ಜನರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದೇ ವೇಳೆಗೆ ಕೇಂದ್ರ ಸರಕಾರವು ಘಟನೆಯ ಕುರಿತು ರಾಜ್ಯ ಸರಕಾರದಿಂದ ವರದಿಯನ್ನು ಕೇಳಿದೆ. ಮೃತ ಯುವಕನ್ನು ಥಳಿಸುತ್ತಿರುವಾಗ ಗುಂಪಿನಲ್ಲಿದ್ದ ಹಲವರು ಸೆಲ್ಫಿಗಳನ್ನು ತೆಗೆದುಕೊಂಡು ಅಮಾನವೀತೆಯನ್ನು ಪ್ರದರ್ಶಿಸಿದ್ದಲ್ಲದೆ, ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದರು.

ಗುಂಪು ಮೃತ ಮಧುವನ್ನು ಬರ್ಬರವಾಗಿ ಥಳಿಸಿತ್ತು. ಗಂಭೀರ ಆಂತರಿಕ ಗಾಯಗಳಿಂದ ಆತ ಮೃತಪಟ್ಟಿದ್ದಾನೆ ಮತ್ತು ಆತನ ಎರಡು ಪಕ್ಕೆಲುಬುಗಳು ಮುರಿದಿದ್ದವು ಎಂದು ಮರಣೋತ್ತರ ಪರೀಕ್ಷೆಯನ್ನು ನಡೆಸಿದ ತ್ರಿಶೂರು ಮೆಡಿಕಲ್ ಕಾಲೇಜಿನ ವೈದ್ಯರು ಮತ್ತು ವಿಧಿವಿಜ್ಞಾನ ತಜ್ಞರ ತಂಡವು ತನ್ನ ವರದಿಯಲ್ಲಿ ತಿಳಿಸಿದೆ.

 ಘಟನೆಯ ಬಗ್ಗೆ ಮತ್ತು ರಾಜ್ಯ ಸರಕಾರವು ಕೈಗೊಂಡಿರುವ ಕ್ರಮಗಳ ಕುರಿತು ವರದಿಯೊಂದನ್ನು ಸಲ್ಲಿಸುವಂತೆ ತನ್ನ ಸಚಿವಾಲಯವು ಕೇರಳ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜುವಲ್ ಒರಾಮ್ ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಬರ್ಬರ ಹತ್ಯೆಯನ್ನು ಖಂಡಿಸಿ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಶನಿವಾರ ಮನ್ನಾರಕೂದ್ ತಾಲೂಕಿನಲ್ಲಿ ಹರತಾಳವನ್ನು ಆಚರಿಸಿದವು.

ರಾಜ್ಯ ಸರಕಾರವು ಮೃತ ಮಧುವಿನ ಕುಟುಂಬಕ್ಕೆ 10 ಲ.ರೂ.ಗಳ ಪರಿಹಾರವನ್ನು ಪ್ರಕಟಿಸಿದೆ.

ತನ್ಮಧ್ಯೆ ಮೃತನ ಸೋದರಿ ಚಂದ್ರಿಕಾ ಅವರು, ಮಧು ವಾಸವಿದ್ದ ಗುಹೆಯನ್ನು ಮೊದಲು ಪತ್ತೆ ಹಚ್ಚಿದ್ದು ಅರಣ್ಯಾಧಿಕಾರಿಗಳು ಮತ್ತು ಅವರು ಆತನ ಇರುವಿಕೆಯ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಿದ್ದರು ಎಂದು ಆಪಾದಿಸಿದ್ದಾರೆ. ಈ ಅಧಿಕಾರಿಗಳನ್ನೂ ಪ್ರಕರಣದಲ್ಲಿ ಆರೋಪಿಗಳನ್ನಾಗಿ ಹೆಸರಿಸಬೇಕು ಎಂದು ಅವರು ಆಗ್ರಹಿಸಿದರು.

ಮಧುವನ್ನು ಹಿಡಿದ ಬಳಿಕ ಆತನನ್ನು ಭಾರವಾದ ಚೀಲವನ್ನು ಹೊತ್ತು ಕನಿಷ್ಠ ನಾಲ್ಕು ಕಿ.ಮೀ.ವರೆಗೆ ಬಲವಂತದಿಂದ ನಡೆಸಲಾಗಿತ್ತು. ಅರಣ್ಯ ಇಲಾಖೆಯ ಜೀಪ್ ಅಲ್ಲಿತ್ತಾದರೂ ಆತನನ್ನು ವಾಹನದಲ್ಲಿ ಕರೆದೊಯ್ಯಲು ಅವರು ನಿರಾಕರಿಸಿದ್ದರು. ಮಧು ಕುಡಿಯಲು ನೀರು ಕೇಳಿದಾಗಲೂ ನಿರಾಕರಿಸಲಾಗಿತ್ತು ಎಂದು ಚಂದ್ರಿಕಾ ಆರೋಪಿಸಿ ದರು.

ಈ ಅಪರಾಧದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು ಎನ್ನುವುದನ್ನು ರಾಜ್ಯ ಅರಣ್ಯ ಸಚಿವ ಕೆ.ರಾಜು ಅವರು ನಿರಾಕರಿಸಿದ್ದಾರೆ.

ಮಧು ಮಾನಸಿಕವಾಗಿ ಅಸ್ವಸ್ಥನಾಗಿದ್ದ ಮತ್ತು ಬಹಳ ವರ್ಷಗಳಿಂದ ತನ್ನ ಕುಟುಂಬದಿಂದ ದೂರವಾಗಿ ವಾಸವಿದ್ದ. ಬದುಕುಳಿಯಲು ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಆತ ಯಾವಾಗಾದರೊಮ್ಮೆ ಅರಣ್ಯದಿಂದ ಹೊರಕ್ಕೆ ಬರುತ್ತಿದ್ದ ಮತ್ತು ಗುಂಪು ಆರೋಪಿಸಿರುವಂತೆ ಆತ ಕಳ್ಳನಾಗಿರಲಿಲ್ಲ ಎಂದು ಸಂಬಂಧಿಗಳು ತಿಳಿಸಿದ್ದಾರೆ.

ಈ ಅಮಾನವೀಯ ಹತ್ಯೆಯು ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಈ ಘಟನೆಯನ್ನು ಖಂಡಿಸಿದ್ದಾರೆ.

ಈ ಘಟನೆಯು ರಾಜ್ಯದ ದುರ್ಗಮ ಪ್ರದೇಶಗಳಲ್ಲಿ ಬುಡಕಟ್ಟು ಜನರ ಜೀವನ ಸ್ಥಿತಿಗಳನ್ನೂ ಬಹಿರಂಗಗೊಳಿಸಿದೆ. ಅಟ್ಟಪಾಡಿ ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶ ಗಳಲ್ಲೊಂದಾಗಿದ್ದು, ಪೌಷ್ಟಿಕ ಆಹಾರದ ಕೊರತೆಯಿಂದ ಮಕ್ಕಳ ಸಾವುಗಳಿಂದಾಗಿ ಈ ಗ್ರಾಮವು ಆಗಾಗ್ಗೆ ಸುದ್ದಿಗೆ ಗ್ರಾಸವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News