ಗ್ರಾಪಂ ಅಧ್ಯಕ್ಷರಿಗೆ ಕಾರ್ಯಾಂಗ ಅಧಿಕಾರ ನೀಡಿ: ಕೆ.ಸಿ.ಕೊಂಡಯ್ಯ
ಉಡುಪಿ, ಫೆ.24: ಗ್ರಾಮ ಪಂಚಾಯತ್‌ಗಳನ್ನು ಸ್ಥಳೀಯ ಸರಕಾರವಾಗಿ ಪರಿವರ್ತನೆ ಮಾಡುವುದು ಇಂದಿನ ಅಗತ್ಯವಾಗಿದೆ. ಆದರೆ ಆ ದಿಕ್ಕಿನಲ್ಲಿ ಈವರೆಗೆ ಯಾವುದೇ ಸುಧಾರಣೆ ಆಗಿಲ್ಲ. ಗ್ರಾಪಂ ಅಧ್ಯಕ್ಷರಿಗೆ ಕಾರ್ಯಾಂಗ ಅಧಿಕಾರವೇ ನೀಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೆ.ಸಿ.ಕೊಂಡಯ್ಯ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಉಡುಪಿ, ಕಾರ್ಕಳ, ಕುಂದಾಪುರ ತಾಪಂ, ಕುಂದಾಪುರ ತಾಲೂಕು ಪಂಚಾಯತ್‌ರಾಜ್ ಒಕ್ಕೂಟ ಹಾಗೂ ಕರ್ನಾಟಕ ಗ್ರಾಪಂ ಹಕ್ಕೊತ್ತಾಯ ಆಂದೋಲನ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ಶನಿವಾರ ಆಯೋಜಿಸಲಾದ 73ನೇ ಸಂವಿಧಾನ ತಿದ್ದುಪಡಿಯ 25 ವರ್ಷಾ ಚರಣೆ ‘ಗ್ರಾಮ ಸ್ವರಾಜ್ ಚಿಂತನ ಮಂಥನ’ ಎರಡನೆ ದಿನದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗ್ರಾಪಂ ಅಧ್ಯಕ್ಷರು ಸ್ಥಳೀಯ ಸರಕಾರದ ಮುಖ್ಯಮಂತ್ರಿ ಇದ್ದಂತೆ. ಆದರೆ ಅಧ್ಯಕ್ಷರಿಗೆ ಯಾವುದೇ ಅಧಿಕಾರ ಇಲ್ಲ. ಹೀಗಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ವರದಿಯನ್ನು ತಾಪಂಗೆ ನೀಡುತ್ತಿದ್ದಾರೆ. ಅಧ್ಯಕ್ಷರು ಹೇಳಿದಾಗೆ ಕೇಳುವುದಿಲ್ಲ. ಗ್ರಾಪಂಗಳಿಗೆ ಈವರೆಗೆ ಪರಿಪೂರ್ಣ ಅಧಿಕಾರಿವನ್ನು ನೀಡಿಲ್ಲ ಎಂದು ಅವರು ಟೀಕಿಸಿದರು.
ಅಧ್ಯಕ್ಷರಿಗೆ ಕಾರ್ಯನಿರ್ವಾಹಕ ಅಧಿಕಾರವನ್ನು ನೀಡಬೇಕು. ವಿವಿಧ ಇಲಾಖೆಯ ಅನುದಾನಗಳ ಬಗ್ಗೆ ಮಾಹಿತಿಯನ್ನು ಗ್ರಾಪಂಗಳಿಗೆ ನೀಡಬೇಕು. ಗ್ರಾಮಸಭೆಗಳಲ್ಲಿ ಸ್ಥಳೀಯ ಅಧಿಕಾರಿಗಳ ಹಾಜರಾತಿ ಕಡ್ಡಾಯ ಮಾಡಬೇಕು. ಅಧ್ಯಕ್ಷರು ಪ್ರಶ್ನೆ ಮಾಡುವ ಅಧಿಕಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಕರ್ನಾಟಕ ಪಂಚಾಯತ್‌ರಾಜ್ ಪರಿಷತ್ ಕಾರ್ಯಾಧ್ಯಕ್ಷ ಸಿ.ನಾರಾ ಯಣ ಸ್ವಾಮಿ ಭಾಗವಹಿಸಿದ್ದರು.
ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಭೂತನ್ ರಾಜ್ಯ ಸರಕಾರದ ಸಲಹೆಗಾರ ಪಿ.ಪಿ. ಬಾಲನ್, ಕೇರಳ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ಎಂ.ವಿಜಯಾನಂದ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಸಮಿತಿ ಸದಸ್ಯೆ ನಂದನ ರೆಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಹಕ್ಕೊತ್ತಾಯ ಮತ್ತು ಶಿಫಾರಸ್ಸುಗಳನ್ನು ಕರ್ನಾಟಕ ಪಂಚಾ ಯತ್ ರಾಜ್ ಕಾಯಿದೆ ತಿದ್ದುಪಡಿ ಸಮಿತಿಯ ಸದಸ್ಯ ಟಿ.ಬಿ.ಶೆಟ್ಟಿ ಮಂಡಿಸಿ ದರು. ಒಕ್ಕೂಟದ ಕುಂದಾಪುರ ತಾಲೂಕು ಗೌರವಾಧ್ಯಕ್ಷ ಜನಾರ್ದನ ಮರವಂತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ ದರು. ಕರ್ನಾಟಕ ಪಂಚಾಯತ್‌ರಾಜ್ ಪರಿಷತ್ ಆಡಳಿತ ಮಂಡಳಿ ಸದಸ್ಯ ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖ ನಿರ್ಣಯಗಳು
ದೇಶಕ್ಕೆ ಮಾದರಿಯಾಗಬಹುದಾದಂತಹ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯಿದೆಯ ಸಮಗ್ರ ಪರಿಣಾಮಕಾರಿ ಅನುಷ್ಠಾನ ಮಾಡಬೇಕು. ರಮೇಶ್ ಕುಮಾರ್ ಅಧ್ಯಕ್ಷತೆಯ ಕಾಯಿದೆ ತಿದ್ದುಪಡಿ ಸಮಿತಿ ಯ ಶಿಫಾರಸ್ಸು ಮಾಡಿದ, ಶಿಫಾರಸ್ಸುಗಳಿಂದ ಕೈಬಿಟ್ಟು ಹೋಗಿರುವ ಪ್ರಮುಖ ಅಂಶಗಳ ಪುನರ್ ಸೇರ್ಪಡೆ ಮಾಡಬೇಕು. ಸಂವಿಧಾನದ 73ನೆ ತಿದ್ದುಪಡಿ ಕಾಯಿದೆಯನ್ನು ಇನ್ನೂ ಬಲಗೊಳಿಸಲು ಆಗಬೇಕಾದಂತಹ ತಿದ್ದುಪಡಿಗಳ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕು ಎಂದು ನಿರ್ಣಯವನ್ನು ತೆಗೆದು ಕೊಳ್ಳಲಾಯಿತು.