ಪ್ರಧಾನಿ ನರೇಂದ್ರ ಮೋದಿ ವಿಶ್ವದ ‘ಅತ್ಯಂತ ದುಬಾರಿ ಕಾವಲುಗಾರ’

Update: 2018-02-24 17:10 GMT

ಹೊಸದಿಲ್ಲಿ,ಫೆ.24: ಕಳೆದ ಕೆಲವು ದಿನಗಳಲ್ಲಿ ದೇಶದಲ್ಲಿ ಬಹಿರಂಗಗೊಂಡಿರುವ ಪ್ರಮುಖ ಬ್ಯಾಂಕಿಂಗ್ ಹಗರಣಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಶನಿವಾರ ಇಲ್ಲಿ ಕಟುವಾಗಿ ಟೀಕಿಸಿದ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು, ಮೋದಿಯವರನ್ನು ವಿಶ್ವದ ‘ಅತ್ಯಂತ ದುಬಾರಿ ಕಾವಲುಗಾರ’ ಎಂದು ಬಣ್ಣಿಸಿದರು.

ಯುಪಿಎ ಆಡಳಿತದಲ್ಲಿ 1.76 ಲ.ಕೋ.ರೂ.ಗಳ 2ಜಿ ಹಗರಣವಿದ್ದಾಗ ಮೋದಿ ಯವರು ಕಾಂಗ್ರೆಸ್ ವಿರುದ್ಧ ಪ್ರತಿದಿನವೂ ಹೇಳಿಕೆಗಳನ್ನು ನೀಡುತ್ತಿದ್ದರು. ಅದು ಕಲ್ಪಿತ ನಷ್ಟವಾಗಿತ್ತು. ಯಾವುದೇ ಹಗರಣ ನಡೆದೇ ಇಲ್ಲ ಎಂದು ಬಳಿಕ ನ್ಯಾಯಾಲಯವೂ ಹೇಳಿತ್ತು ಎಂದು ಸುದ್ದಿಗಾರರೊಡನೆ ಮಾತನಾಡಿದ ಸಿಬಲ್ ಹೇಳಿದರು.

 ವಜ್ರ ವ್ಯಾಪಾರಿ ನೀರವ್ ಮೋದಿ(11,300 ಕೋ.ರೂ) ಮತ್ತು ಇತರರು ಮಾಡಿರುವ ಬ್ಯಾಂಕ್ ವಂಚನೆಗಳು ವಾಸ್ತವ ನಷ್ಟವನ್ನುಂಟು ಮಾಡಿದ್ದು, ಈಗೇಕೆ ಮೋದಿಯವರು ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.

 ಶುಕ್ರವಾರ ಇಟಿ ಗ್ಲೋಬಲ್ ಬಿಸಿನೆಸ್ ಸಮಿಟ್‌ನಲ್ಲಿ ಬ್ಯಾಂಕ್ ವಂಚನೆಗಳ ಬಗ್ಗೆ ಮೊದಲ ಬಾರಿಗೆ ಬಾಯಿಬಿಚ್ಚಿದ್ದ ಮೋದಿ ಅವರು, ಅಕ್ರಮಗಳ ವಿರುದ್ಧ ಸರಕಾರವು ಕಠಿಣ ಕ್ರಮವನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ದರು.

ಅವರು(ಮೋದಿ) ಸರಕಾರದಿಂದ ಮನೆ ಪಡೆಯುತ್ತಾರೆ, ವಿಮಾನ ಪಡೆಯುತ್ತಾರೆ. ಅವರು ವಿಶ್ವದ ಅತ್ಯಂತ ದುಬಾರಿ ಕಾವಲುಗಾರನಾಗಿದ್ದಾರೆ ಎಂದ ಸಿಬಲ್, ಅವರ ನಿಗಾದಡಿ ದೇಶವು ನಷ್ಟದಲ್ಲಿರುವಾಗ ಈ ಹಗರಣಕೋರರು ಲಾಭ ಗಳಿಸಿದ್ದು ಹೇಗೆ ಎನ್ನುವುದನ್ನು ಅವರು ವಿವರಿಸಬೇಕಿದೆ ಎಂದರು.

ದೇಶದಿಂದ ಪರಾರಿಯಾಗಿರುವ ಈ ಹಗರಣಕೋರರಿಗೂ ಹಲವಾರು ಬಿಜೆಪಿ ನಾಯಕರಿಗೂ ಸಂಬಂಧಗಳಿವೆ ಎಂದು ಸಿಬಲ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News