ಶಕ್ತಿನಗರ ಫ್ಲಾಟ್ ಹಂಚಿಕೆಯಲ್ಲಿ ಅಕ್ರಮ: ಬಿಜೆಪಿ ಆರೋಪ

Update: 2018-02-24 17:32 GMT

ಮಂಗಳೂರು, ಫೆ. 24: ಮನಪಾ ವ್ಯಾಪ್ತಿಯ ಫಲಾನುಭವಿಗಳಿಗೆ ಶಕ್ತಿನಗರದಲ್ಲಿ ವಸತಿ ಸಂಕೀರ್ಣ ನಿರ್ಮಿಸುವ ಯೋಜನೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಟೆಂಡರ್ ಪ್ರಕ್ರಿಯೆ ಮಾಡಲಾಗಿದೆ. ಅಲ್ಲದೆ ಶಾಸಕ ಜೆ.ಆರ್.ಲೋಬೊ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಸ್ತಿತ್ವದಲ್ಲೆ ಇಲ್ಲದ ನಗರಾಶ್ರಯ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಸರಕಾರವು ಶಕ್ತಿನಗರದಲ್ಲಿ ವಸತಿ ಸಂಕೀರ್ಣ ನಿರ್ಮಾಣಕ್ಕೆ 61.50 ಕೋ.ರೂ. ಮಂಜೂರಾತಿ ನೀಡಿದೆ. ಅದರಲ್ಲಿ 13.75 ಕೋ.ರೂ.ಕೇಂದ್ರ, 11.75 ಕೋ.ರೂ.ಗಳನ್ನು ರಾಜ್ಯ ಸರಕಾರ ನೀಡಿದೆ. ಜತೆಗೆ ಸುಮಾರು 20 ಕೋ.ರೂ.ಗಳನ್ನು ಫಲಾನುಭವಿಗಳು ಭರಿಸಬೇಕಾಗುತ್ತದೆ. ಸರಕಾರವು ಮಂಜೂರಾತಿ ನೀಡುವ ಸಂದರ್ಭ ಸ್ಥಳೀಯಾಡಳಿತದ 15 ಕೋ.ರೂ.ಅನುದಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ಬಳಿಕವೇ ಟೆಂಡರ್ ಪ್ರಕ್ರಿಯೆ ಆರಂಭಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಪಾಲಿಕೆಯಲ್ಲಿ ಅಷ್ಟೊಂದು ಮೊತ್ತದ ಅನುದಾನವಿಲ್ಲದಿರುವುದರಿಂದ ಅದನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಬರೆಯಲಾಗಿದೆ. ಆದರೆ 10 ಎಕರೆ ನಿವೇಶನಕ್ಕೆ ಅಷ್ಟು ಅನುದಾನ ನೀಡಲು ಸಾಧ್ಯವಿಲ್ಲ ಎಂಬುದನ್ನೂ ಸರಕಾರ ತಿಳಿಸಿದೆ ಎಂದರು.

ಪ್ರಸ್ತುತ ಅಸ್ತಿತ್ವದಲ್ಲಿರುವ ಎಲ್ಲಾ ನಗರ ವಸತಿ ಯೋಜನೆಗಳನ್ನು ಪ್ರಧಾನಮಂತ್ರಿ ಅವಾಸ್ ಯೋಜನೆಗಳೊಂದಿಗೆ ಸಂಯೋಜಿಸಿ ಜಿಲ್ಲಾಧಿಕಾರಿಯ ಅಧ್ಯಕ್ಷತೆಯ ಸಮಿತಿಯ ಮೂಲಕ ಫಲಾನುಭವಿಗಳನ್ನು ಆರಿಸಬೇಕು ಎಂಬುದನ್ನು ವಸತಿ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಶಾಸಕರು ನಿಯಮಗಳನ್ನು ಗಾಳಿಗೆ ತೂರಿ ತಮ್ಮದೇ ಸದಸ್ಯರನ್ನೊಳಗೊಂಡ ಹಿಂದಿನ ಆಶ್ರಯ ಸಮಿತಿಯ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದ್ದಾರೆ ಎಂದು ಪ್ರೇಮಾನಂದ ಶೆಟ್ಟಿ ಆರೋಪಿಸಿದರು.

ಆರಂಭದಲ್ಲಿ ಈ ಯೋಜನೆಯಲ್ಲಿ 1,100 ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಪತ್ರ ಬರೆಯಲಾಗಿದೆ. ಅದರಲ್ಲಿ ಕಾಂಗ್ರೆಸ್ ಸರಕಾರದ ಸಾಧನೆ, ತಾನೇ ಮಾಡಿದ್ದೇನೆ ಎಂದು ಬರೆದಿದ್ದಾರೆ. ಆದರೆ ಬಳಿಕ 170 ಲಾನುಭವಿಗಳನ್ನು ಕೈಬಿಟ್ಟು ಕೇವಲ 930 ಲಾನುಭವಿಗಳನ್ನು ಮಾತ್ರ ಅಂತಿಮಗೊಳಿಸಿ ದ್ದಾರೆ. ಜತೆಗೆ ಪದೇ ಪದೇ ಲಾನುಭವಿಗಳ ಸಭೆ ನಡೆಸಿ ಕಾಂಗ್ರೆಸ್ ಸಾಧನೆ ಎಂಬಂತೆ ಬಿಂಬಿಸಿದ್ದಾರೆ ಎಂದು ಆರೋಪಿಸಿದ ಪ್ರೇಮಾನಂದ ಶೆಟ್ಟಿ, ಕೆಲವು ದಿನಗಳ ಹಿಂದೆ ಪುರಭವನದಲ್ಲಿ ಕಾರ್ಯಕ್ರಮ ನಡೆಸಿ ಫಲಾನುಭವಿಗಳನ್ನು ಲಾಟರಿ ಮೂಲಕ ಆರಿಸಿದ್ದಾರೆ. ಬಳಿಕ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯನ್ನು ಕರೆಸುವುದಾಗಿ ತಿಳಿಸಿದ್ದಾರೆ. ಆದರೆ ಪ್ರಸ್ತುತ ಯೋಜನೆಯಲ್ಲಿ ಯಾವುದೇ ಪ್ರಗತಿ ಇಲ್ಲದೆ ಕೇವಲ ಚುನಾವಣೆಯ ದೃಷ್ಟಿಯಿಂದ ಆದೇಶ ಪತ್ರ ವಿತರಿಸುವ ನಾಟಕ ಮಾಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಪೊರೇಟರ್‌ಗಳಾದ ಸುಧೀರ್ ಶೆಟ್ಟಿ ಕಣ್ಣೂರು, ರಾಜೇಂದ್ರ, ವಿಜಯಕುಮಾರ್ ಶೆಟ್ಟಿ, ಜೆ. ಸುರೇಂದ್ರ, ರೂಪಾ ಡಿ.ಬಂಗೇರ, ಜಯಂತಿ ಆಚಾರ್, ಪೂರ್ಣಿಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News