ಉ.ಕೊರಿಯ ವಿರುದ್ಧ ಇನ್ನಷ್ಟು ನಿರ್ಬಂಧಗಳನ್ನು ಘೋಷಿಸಿದ ಅಮೆರಿಕ

Update: 2018-02-24 17:33 GMT

 ವಾಶಿಂಗ್ಟನ್,ಫೆ.24: ಅಣ್ವಸ್ತ್ರ ಬಲಾಢ್ಯ ರಾಷ್ಟ್ರವಾಗುವ ಮಹತ್ವಾಕಾಂಕ್ಷೆಯನ್ನು ಕೈಬಿಡುವಂತೆ ಉತ್ತರ ಕೊರಿಯದ ಮೇಲೆ ಒತ್ತಡ ಹೇರುವ ತಂತ್ರವಾಗಿ ಆ ದೇಶದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮತ್ತೆ ಕಠಿಣ ನಿರ್ಬಂಧಗಳನ್ನು ಘೋಷಿಸಿದ್ದಾರೆ.

  ಉತ್ತರ ಕೊರಿಯದ ವಿರುದ್ಧ ಹಿಂದೆಂದೂ ವಿಧಿಸದಿದ್ದಂತಹ ನಿರ್ಬಂಧಗಳನ್ನು ನಾವು ಇಂದು ಹೇರಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ. ವಾಶಿಂಗ್ಟನ್‌ನಲ್ಲಿ ಶುಕ್ರವಾರ ನಡೆದ ಕನ್ಸರ್ವೇಟಿವ್ ಪಾಲಿಟಕಲ್ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಉತ್ತರ ಕೊರಿಯದ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಿರುವುದನ್ನು ಪ್ರಕಟಿಸಿದರು.

 ಉತ್ತರ ಕೊರಿಯದ ವಿರುದ್ಧ ಈ ಹಿಂದೆ ನಿರ್ಬಂಧಗಳನ್ನೂ ಹೇರಿದ ಬಳಿಕವು ಆ ದೇಶದ ಜೊತೆ ಅಕ್ರಮವಾಗಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದ 56 ನೌಕಾಯಾನ ಕಂಪೆನಿಗಳು ಹಾಗೂ ಇತರ ವಾಣಿಜ್ಯೋದ್ಯಮ ಸಂಸ್ಥೆಗಳನ್ನು ಗುರಿಯಿರಿಸಿ ಈ ನಿರ್ಬಂಧಗಳನ್ನು ವಿಧಿಸಲಾಗಿದೆ.

  ಈ ಕ್ರಮಗಳ ಮೂಲಕ ಉತ್ತರ ಕೊರಿಯದ ಕಿಮ್ ಜೊಂಗ್ ಉನ್ ಆಡಳಿತದ ಮೇಲೆ ಒತ್ತಡವನ್ನು ಹೇರಲು ಹಾಗೂ ಅದಕ್ಕೆ ಪರಮಾಣು ನಿಶಸ್ತ್ರೀಕರಣವಲ್ಲದೆ ಬೇರೆ ದಾರಿಯಿಲ್ಲವೆಂಬುದನ್ನು ತೋರಿಸಿಕೊಡಲು ನಾವು ದೃಢನಿರ್ಧಾರ ಮಾಡಿದ್ದೇವೆ ಎಂದು ಟ್ರಂಪ್ ಆಡಳಿತದ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News