ಗುರುವಾಯನಕೆರೆ: ಲಾಠಿ ಬೀಸಿ ಪ್ರತಿಭಟನಕಾರರನ್ನು ಚದುರಿಸಿದ ಪೊಲೀಸರು
ಬೆಳ್ತಂಗಡಿ, ಫೆ. 26: ರಸ್ತೆ ದುರಸ್ತಿಗೆ ಒತ್ತಾಯಿಸಿ ಗುರುವಾಯನಕೆರೆ - ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿ ಪ್ರತಿಭಟನಕಾರರನ್ನು ಚದುರಿಸಿದ ಘಟನೆ ಸೋಮವಾರ ನಡೆದಿದೆ.
ಕೊಯ್ಯೂರು, ಎರುಕಡಪು, ಗೇರುಕಟ್ಟೆ ರಸ್ತೆ ದುರಸ್ತಿಗೆ ಒತ್ತಾಯಿಸಿ ಗೇರುಕಟ್ಟೆ ಪರಪ್ಪು ಮಸೀದಿ ಬಳಿ ರಸ್ತೆ ತಡೆದು ನಡೆಸಲಾಗುತ್ತಿದ್ದ ಪ್ರತಿಭಟನೆ ಮುಂದುವರಿದು ಗುರುವಾಯನಕೆರೆ - ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿ ಪ್ರತಿಭಟನಕಾರರನ್ನು ಚದುರಿಸಿದರು.
ಇಂದು ಬೆಳಗ್ಗಿನಿಂದಲೇ ಪ್ರತಿಭಟನೆ ನಡೆಯುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಂಜೆಯ ವೇಳೆಗೂ ಯಾವುದೇ ಸ್ಪಷ್ಟ ಭರವಸೆ ದೊರಕದ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ಆರಂಭಿಸಿದರು. ಪೊಲೀಸರು ವಿನಂತಿಸಿದರೂ ರಸ್ತೆ ತಡೆಯನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಬಳಿಕ ಪೊಲೀಸರು ಲಾಠಿ ಬೀಸಿ ಪ್ರತಿಭಟನಕಾರರನ್ನು ಚದುರಿಸಿದರು ಎಂದು ತಿಳಿದುಬಂದಿದೆ.
ಇದೀಗ ರಾಜ್ಯ ಹೆದ್ದಾರಿಯಿಂದ ಹಿಂದೆ ಸರಿದಿರುವ ಪ್ರತಿಭಟನಕಾರರು ಎರುಕಡಪು-ಕೊಯ್ಯೂರು ರಸ್ತೆಯಲ್ಲಿ ಪ್ರತಿಭಟನೆ ಮುಂದುವರಿಸಿದ್ದಾರೆ.