×
Ad

ಬಿಹಾರ: ಬಿಜೆಪಿ ನಾಯಕ ಬೈಥಾ ವಿರುದ್ಧ ಎಫ್‌ಐಆರ್ ದಾಖಲು

Update: 2018-02-26 18:40 IST

ಹೊಸದಿಲ್ಲಿ,ಫೆ.26: ಮುಝಫ್ಫರಪುರ ನಗರದ ಹೊರವಲಯದಲ್ಲಿ ಶನಿವಾರ 9 ಶಾಲಾಮಕ್ಕಳನ್ನು ಬಲಿ ತೆಗೆದುಕೊಂಡ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೀತಾಮಢಿಯ ಬಿಜೆಪಿ ನಾಯಕ ಮನೋಜ್ ಬೈಥಾ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಅವರ ಬಂಧನಕ್ಕೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಅಪಘಾತವನ್ನೆಸಗಿದ ಬೊಲೆರೋ ವಾಹನ ಬೈಥಾ ಹೆಸರಿನಲ್ಲಿ ನೋಂದಣಿಯಾಗಿದ್ದು, ಅವರೇ ಅದನ್ನು ಚಲಾಯಿಸುತ್ತಿದ್ದರು ಎಂದು ಮೂಲಗಳು ಹೇಳಿವೆಯಾದರೂ, ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನದಲ್ಲಿದ್ದ ಮೊಬೈಲ್ ಫೋನೊಂದನ್ನು ಸೋಮವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಪಘಾತ ಸ್ಥಳದಿಂದ ಸುಮಾರು 35 ಕಿ.ಮೀ. ದೂರದ ರೂನಿ ಸೈದಪುರದಲ್ಲಿರುವ ಟೋಲ್ ಸಂಗ್ರಹ ಕೇಂದ್ರದ ಸಿಸಿಟಿವಿಯ ವೀಡಿಯೊ ತುಣುಕು ಮಧ್ಯಾಹ್ನ 12:38ಕ್ಕೆ ಬೈಥಾ ವಾಹನದಲ್ಲಿ ಕುಳಿತುಕೊಂಡಿರುವುದನ್ನು ತೋರಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಧ್ಯಾಹ್ನ 1:30ರ ಸುಮಾರಿಗೆ ಅಪಘಾತ ಸಂಭವಿಸಿತ್ತು.

ತನ್ಮಧ್ಯೆ ಬಿಹಾರ ವಿಧಾನಸಭೆಯ ಮುಂದೆ ಪ್ರತಿಭಟನೆ ನಡೆಸಿ ಘಟನೆಯನ್ನು ಖಂಡಿಸಿರುವ ಆರ್‌ಜೆಡಿ ನಾಯಕರು, ತಕ್ಷಣ ಕ್ರಮವನ್ನು ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.

ಆರೋಪಿ ಯಾವುದೇ ಪಕ್ಷಕ್ಕೆ ಸೇರಿದ್ದರೂ ಆತನ ವಿರುದ್ಧ ಅತ್ಯಂತ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬಿಹಾರದ ಉಪಮುಖ್ಯಮಂತ್ರಿ ಸುಶೀಲಕುಮಾರ್ ಮೋದಿ ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ಅಪಘಾತದಲ್ಲಿ ಅಮಾಯಕ ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ, ಇದಕ್ಕಿಂತ ದೊಡ್ಡ ಅಪರಾಧ ಇನ್ನೊಂದಿಲ್ಲ ಎಂದು ಅವರು ಹೇಳಿದರು.

ಅಪಘಾತದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ರವಿಶಂಕರ ಪ್ರಸಾದ ಅವರು ಮಾ.1ರಂದು ಪಾಟ್ನಾದ ಪಿಎನ್‌ಟಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಹೋಳಿ ಆಚರಣೆ ಯನ್ನು ರದ್ದುಗೊಳಿಸಿದ್ದಾರೆ.

ಧರಮ್‌ಪುರ ಮಿಡ್ಲ್‌ಸ್ಕೂಲ್‌ನ ವಿದ್ಯಾರ್ಥಿಗಳು ಮನೆಗೆ ಮರಳಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದಾಗ ವೇಗವಾಗಿ ಬಂದ ಬೊಲೆರೋ ವಾಹನ ಅವರಿಗೆ ಢಿಕ್ಕಿ ಹೊಡೆದಿದ್ದು, 7ರಿಂದ 13 ವರ್ಷ ವಯೋಮಾನದ ಒಂಭತ್ತು ಮಕ್ಕಳು ಸಾವನ್ನಪ್ಪಿದ್ದರು.

ಅಪಘಾತದ ನಂತರ ಮೂವರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಥಾ ಸೀತಾಮಢಿ ಜಿಲ್ಲಾ ಬಿಜೆಪಿ ಘಟಕದ ಪದಾಧಿಕಾರಿಯಾಗಿದ್ದಾರೆ ಎನ್ನುವುದನ್ನು ದೃಢಪಡಿಸಿದ್ದ ಬಿಹಾರ ಬಿಜೆಪಿಯ ವಕ್ತಾರ ರಾಜೀವ ರಂಜನ್ ಅವರು, ‘ನಮಗೆ ಈವರೆಗೆ ತಿಳಿದಿರುವಂತೆ ಬೈಥಾ ವಾಹನದಲ್ಲಿರಲಿಲ್ಲ’ಎಂದು ಹೇಳಿದ್ದರು.

ಬಿಜೆಪಿ ತನ್ನ ನಾಯಕನನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News