ರಜೆ ನಿರಾಕರಿಸಿದ ಮೇಲಧಿಕಾರಿಯ ಗುಂಡಿಕ್ಕಿ ಹತ್ಯೆ
ಶಿಲಾಂಗ್, ಫೆ.26: ರಜೆ ಪಡೆಯಲು ಮೇಲಾಧಿಕಾರಿ ಅನುಮತಿ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ರೈಲ್ವೇ ರಕ್ಷಣಾ ಪಡೆ(ಆರ್‌ಪಿಎಫ್)ಯ ಕಾನ್‌ಸ್ಟೇಬಲ್ ಮೇಲಧಿಕಾರಿಯನ್ನು ಗುಂಡಿಕ್ಕಿ ಸಾಯಿಸಿ, ಇತರ ಮೂವರನ್ನು ಗಾಯಗೊಳಿಸಿದ ಘಟನೆ ಮೇಘಾಲಯದ ನೈಋತ್ಯ ‘ಖಾಸಿ ಹಿಲ್ಸ್ ’ ಜಿಲ್ಲೆಯಲ್ಲಿರುವ ಆರ್‌ಪಿಎಫ್ ಶಿಬಿರದಲ್ಲಿ ನಡೆದಿದೆ.
ಅರ್ಜುನ್ ದೇಶ್‌ವಾಲ್ ಆರೋಪಿಯಾಗಿದ್ದು, ಈತನನ್ನು ಬಂಧಿಸಲಾಗಿದ್ದು, ಈತ ಹತ್ಯೆ ನಡೆಸಲು ಬಳಸಿದ್ದ ಸೇವಾ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ. ಮಾಕಿರ್‌ವಾಟ್ ಎಂಬಲ್ಲಿರುವ ಆರ್‌ಪಿಎಫ್ ಶಿಬಿರದಲ್ಲಿ ರವಿವಾರ ಬೆಳಿಗ್ಗೆ ಘಟನೆ ನಡೆದಿದೆ. ಅರ್ಜುನ್ ದೇಶ್‌ಪಾಲ್ ರಜೆಗೆ ಅನುಮತಿ ಕೋರಿದ್ದಾಗ ಆರ್‌ಪಿಎಫ್‌ನ ಅಸಿಸ್ಟೆಂಟ್ ಕಮಾಂಡರ್ ಮುಕೇಶ್ ಸಿ.ತ್ಯಾಗಿ ನಿರಾಕರಿಸಿದ್ದಾರೆ. ಇದರಿಂದ ಕ್ರೋಧಗೊಂಡ ದೇಶ್‌ವಾಲ್ ತನ್ನಲ್ಲಿದ್ದ ಸರ್ವಿಸ್ ರೈಫಲ್‌ನಿಂದ 13 ಸುತ್ತು ಗುಂಡು ಹಾರಿಸಿದ್ದಾನೆ. ತ್ಯಾಗಿ ಸ್ಥಳದಲ್ಲೇ ಮೃತಪಟ್ಟರು. ಗಂಭೀರ ಗಾಯಗೊಂಡ ಕಾನ್‌ಸ್ಟೆಬಲ್ ಜೋಗಿಂದರ್ ಕುಮಾರ್, ಸಬ್‌ಇನ್‌ಸ್ಪೆಕ್ಟರ್ ಓಂಪ್ರಕಾಶ್ ಯಾದವ್ ಹಾಗೂ ಇನ್‌ಸ್ಪೆಕ್ಟರ್ ಪ್ರದೀಪ್ ಮೀನ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.