ದಿಲ್ಲಿ ಮುಖ್ಯ ಕಾರ್ಯದರ್ಶಿಗೆ ಹಲ್ಲೆ ಪ್ರಕರಣ: ಸಿಸಿಟಿವಿ ದೃಶ್ಯಾವಳಿ ತಿರುಚಲಾಗಿದೆ; ಪೊಲೀಸ್
ಹೊಸದಿಲ್ಲಿ, ಫೆ. 26: ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಪತ್ತೆಯಾದ ಸಿಸಿಟಿವಿ ದೃಶ್ಯಾವಳಿ ತಿರುಚಲಾಗಿದೆ ಎಂದು ದಿಲ್ಲಿ ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದೃಶ್ಯಾವಳಿಯಲ್ಲಿರುವ ಸಮಯ ಹಾಗೂ ಘಟನೆಯ ಸನ್ನಿವೇಶ ಒಂದಕ್ಕೊಂದು ಹೋಲಿಕೆ ಆಗುತ್ತಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನ್ಯಾಯಾಲಯ ತನ್ನ ಆದೇಶವನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ. ದಿಲ್ಲಿ ಮುಖ್ಯ ಕಾರ್ಯದರ್ಶಿ ಹಾಗೂ ಆಪ್ ಶಾಸಕರ ನಡುವಿನ ಸಭೆಯನ್ನು ಕ್ಯಾಂಪ್ ಕಚೇರಿಯಲ್ಲಿ ಏರ್ಪಡಿಸಿರಲಿಲ್ಲ. ಬದಲಾಗಿ ಮುಖ್ಯಮಂತ್ರಿ ಅವರ ನಿವಾಸದ ಲಿವಿಂಗ್ ರೂಮ್‌ನಲ್ಲಿ ಏರ್ಪಡಿಸಲಾಗಿತ್ತು ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಹರೇಂದ್ರ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ದಿಲ್ಲಿ ಪೊಲೀಸ್ ಆಯಕ್ತರನ್ನು ಭೇಟಿಯಾಗಲಿರುವ ಆಪ್ ನಿಯೋಗ
ದಿಲ್ಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್ ಅವರನ್ನು ಸೋಮವಾರ ಭೇಟಿಯಾಗಿರುವ ಆಪ್ ನಿಯೋಗ, ಸಚಿವ ಇಮ್ರಾನ್ ಹುಸೈನ್ ಹಾಗೂ ದಿಲ್ಲಿ ಮಾತುಕತೆ ಆಯೋಗದ ಉಪಾಧ್ಯಕ್ಷ ಆಶಿಸ್ ಖೇತನ್ ಅವರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸುವಂತೆ ಆಗ್ರಹಿಸಿದೆ. ಆಪ್ ನಾಯಕ ಅಶುತೋಷ್ ಹಾಗೂ ಪಕ್ಷದ ಸಂಸದ ಸಂಜಯ್ ಸಿಂಗ್ ಅವರನ್ನು ಒಳಗೊಂಡ ನಿಯೋಗ, ದಿಲ್ಲಿ ಸೆಕ್ರೇಟರಿಯೇಟ್‌ನಲ್ಲಿ ಫೆಬ್ರವರಿ 20ರಂದು ನಡೆದ ಹಲ್ಲೆಯ ‘ವೀಡಿಯೊ ದಾಖಲೆ’ಯನ್ನು ನಾವು ಪಟ್ನಾಯಕ್ ಅವರಿಗೆ ನೀಡಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದೆ. ಫೆಬ್ರವರಿ 19ರಂದು ಮುಖ್ಯಮಂತ್ರಿ ಕೇಜ್ರಿವಾಲ್ ನಿವಾಸದಲ್ಲಿ ದಿಲ್ಲಿ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆಪ್ ಶಾಸಕ ಪ್ರಕಾಶ್ ಜರ್ವಾಲ್ ಹಾಗೂ ಅಮಾನಾತುಲ್ಲಾ ಖಾನ್ ಅವರನ್ನು ಯಾವುದೇ ಸಾಕ್ಷಗಳಿಲ್ಲದಿದ್ದರೂ ಕೂಡಲೇ ಬಂಧಿಸಲಾಗಿದೆ. ಆದರೆ, ದಿಲ್ಲಿ ಸಚಿವ ಇಮ್ರಾನ್ ಹುಸೈನ್ ಹಾಗೂ ಡಿಡಿಎ ಉಪಾಧ್ಯಕ್ಷ ಆಶಿಶ್ ಕೇತನ್‌ರಿಗೆ ಜೀವ ಬೆದರಿಕೆ ಹಾಕಿದವರ ವಿರುದ್ಧ ಯಾಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಶುತೋಶ್ ಪ್ರಶ್ನಿಸಿದ್ದಾರೆ.