ಮೋದಿ, ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ: ಇಬ್ಬರ ಬಂಧನ
Update: 2018-02-26 19:58 IST
ಹೊಸದಿಲ್ಲಿ, ಫೆ.26: ಹಿಂದೂ ದೇವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ಪ್ರಕಟಿಸಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಧರಮ್‌ದೇವ್ ಸಿಂಗ್ ಎಂಬಾತ ನೀಡಿದ ದೂರಿನ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಎಸಗಿದ ಪ್ರಕರಣ ದಾಖಲಿಸಲಾಗಿದೆ. ಲವಾಯ್ ಪಟ್ಟಿ ಸತಾವ ಗ್ರಾಮದ ನಿವಾಸಿಗಳಾದ ಸಾಹಿಲ್, ಇಂದಲ್ ಕುಮಾರ್, ಅನಿಲ್ ಮತ್ತು ಸನ್ನಿ ಕುಮಾರ್ ಐದು ದಿನದ ಹಿಂದೆ ಹಿಂದೂ ದೇವರು ಹಾಗೂ ಪ್ರಧಾನಿ ಮೋದಿ ಮತ್ತು ಉ.ಪ್ರದೇಶದ ಸಿಎಂ ಆದಿತ್ಯನಾಥ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಲ್ಲದೆ ಅವನ್ನು ವಾಟ್ಸ್ ಆ್ಯಪ್‌ನಲ್ಲಿ ಶೇರ್ ಮಾಡಿಕೊಂಡಿದ್ದರು . ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ತಿಳಿಸಿದ್ದಾರೆ.