ಹೊಸ ಯೋಜನೆಗಳಿಲ್ಲದ, 269.55 ಕೋಟಿ ರೂ. ಮಿಗತೆ ಬಜೆಟ್
ಮಂಗಳೂರು, ಫೆ. 26: ಸ್ಮಾರ್ಟ್ ಸಿಟಿಯಾಗುತ್ತಿರುವ ಮಹಾನಗರ ಪಾಲಿಕೆಯು 2018-19ನೆ ಸಾಲಿಗೆ ಯಾವುದೇ ಹೊಸ ಯೋಜನೆಗಳ ಘೋಷಣೆ ಇಲ್ಲದೆ, ಒಟ್ಟು 269.55 ಕೋಟಿರೂ.ಗಳ ಮಿಗತೆ ಬಜೆಟ್ ಮಂಡನೆ ಮಾಡಿದೆ.
ಹಿಂದಿನ ಸಾಲಿನ ಉಳಿತಾಯ, ಪ್ರಸಕ್ತ ಸಾಲಿನ ಅಂದಾಜು ಆದಾಯ ಹಾಗೂ ಖರ್ಚು ಸೇರಿ ಒಟ್ಟು 269.55 ಕೋಟಿರೂ.ಗಳ ಉಳಿತಾಯವನ್ನು ಮುಂದಿನ ಸಾಲಿನಲ್ಲಿ ನಿರೀಕ್ಷಿಸಲಾಗಿದೆ.
ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಸೋಮವಾರ ಪಾಲಿಕೆಯ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಹಣಕಾಸು, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಬಜೆಟ್‌ನ್ನು ಮಂಡಿಸಿದರು.
ಮಂಗಳೂರು ಮಹಾನಗರ ಪಾಲಿಕೆ 2018-19ನೇ ಸಾಲಿನ ಬಜೆಟ್‌ನಲ್ಲಿ ಹಿಂದಿನ ಸಾಲಿನ ಉಳಿತಾಯ 28560.74 ಲಕ್ಷ ರೂ. ಹಾಗೂ ಈ ಸಾಲಿನ ಆದಾಯ 69840.38 ಲಕ್ಷ ರೂ. ಸೇರಿ ಒಟ್ಟು 98401.12 ಲಕ್ಷ ರೂ. ಮೊತ್ತದ ಸಂಪನ್ಮೂಲ ಕ್ರೋಢೀಕರಣವನ್ನು ನಿರೀಕ್ಷಿಸಿದೆ. ಇದರಲ್ಲಿ 71,446 ಲಕ್ಷ ವೆಚ್ಚವನ್ನು ನಿಗದಿಪಡಿಸಿ, ಸುಮಾರು 26955.07 ಲಕ್ಷ ರೂ.ಗಳ ಉಳಿತಾಯವನ್ನು ನಿರೀಕ್ಷಿಸಲಾಗಿದೆ ಎಂದು ಪ್ರತಿಭಾ ಕುಳಾಯಿ ವಿವರ ನೀಡಿದರು.
ಎಡಿಬಿ ಎರಡನೇ ಹಂತದ ಯೋಜನೆಯ ಅನುದಾನ ಕೆಯುಎಫ್‌ಡಿಸಿಗೆ ನೇರವಾಗಿ ಬಿಡುಗಡೆಯಾಗಿದೆ. ಹಾಗೂ ನಗರೋತ್ಥಾನ 2 ಮತ್ತು 3ನೇ ಹಂತದ ಅನುದಾನ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆಯಾಗಿದೆ. ಈ ಅನುದಾನ ಪಾಲಿಕೆಗೆ ಬಿಡುಗಡೆಯಾಗದ ಕಾರಣ ಆದಾಯ ಕ್ರೋಢೀಕರಣದಲ್ಲಿ ವ್ಯತ್ಯಾಸವಾಗಿದೆ ಎಂದು ಬಜೆಟ್ ಮಂಡನೆಯಲ್ಲಿ ಪ್ರತಿಭಾ ತಿಳಿಸಿದರು.
ಇದೇ ವೇಳೆ 2018-19ನೆ ಸಾಲಿಗೆ ಪಾಲಿಕೆಯ ಸ್ವಂತ ಆದಾಯದಲ್ಲಿ 202.78 ಲಕ್ಷ ರೂ.ಗಳಷ್ಟು ಹೆಚ್ಚಿನ ಆದಾಯ ನಿರೀಕ್ಷಿಸಲಾಗ್ದಿು, 432 ಲಕ್ಷ ರೂ.ಗಳ ವೆಚ್ಚಗಳ ನಿಯಂತ್ರಣಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ತಪ್ಪು ಲೆಕ್ಕ: ಸದಸ್ಯರ ಆಕ್ರೋಶ
ಬಜೆಟ್ ಪ್ರತಿಯಲ್ಲಿ ಕಲ್ಯಾಣ ನಿಧಿ ಯೋಜನೆಯಡಿ ಅಂಕಿ ಸಂಖ್ಯೆಗಳನ್ನು ತಪ್ಪು ತಪ್ಪಾಗಿ ನಮೂದಿಸಿರುವುದು ಆಡಳಿತ ಸಹಿತ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು.
ಎಸ್‌ಸಿ ಮತ್ತು ಎಸ್‌ಟಿಯ ಶೇ.24.10 ಅಡಿಯಲ್ಲಿ ರಾಜ್ಯ ಹಣಕಾಸು ಅನುದಾನದಿಂದ 400.06 ಲಕ್ಷಗಳನ್ನು ಮತ್ತು ಪಾಲಿಕೆ ನಿಧಿಯಡಿ 323 ಲಕ್ಷ ರೂ. ಸೇರಿ ಒಟ್ಟು 961.50 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಇದನ್ನು ಒಟ್ಟು ಸೇರಿಸುವಾಗ 723.06 ಲಕ್ಷ ರೂ. ಆಗುತ್ತದೆ. ಅದೇ ರೀತಿ ಬಡ ಜನರ ಅಭಿವೃದ್ಧಿಗೆ ಶೇ.7.25ರ ಅಡಿಯಲ್ಲಿ ರಾಜ್ಯದಿಂದ 97.59 ಲಕ್ಷ ರೂ. ಪಾಲಿಕೆ ನಿಧಿಯಿಂದ 97 ಲಕ್ಷ ರೂ. ಸೇರಿ ಒಟ್ಟು 289.25 ಲಕ್ಷ ರೂ. ಎಂದು ಹೇಳಲಾಗಿದೆ. ಆದರೆ ವಾಸ್ತವವಾಗಿ ಇದು 194.59 ಲಕ್ಷ ರೂ. ಆಗಬೇಕು. ಅಂಗವಿಕಲರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಶೇ.3 ಅಡಿಯಲ್ಲಿ ರಾಜ್ಯದಿಂದ 40.38 ಲಕ್ಷ ರೂ. ಪಾಲಿಕೆಯಿಂದ 40 ಲಕ್ಷ ರೂ. ಸೇರಿ ಒಟ್ಟು 20 ಲಕ್ಷ ರೂ. ಎಂದು ನಮೂದಿಸಲಾಗಿದೆ. ಇದು 80.35 ಲಕ್ಷ ರೂ. ಆಗಬೇಕು ಎಂದು ವಿಪಕ್ಷ ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ಪಾಲಿಕೆ ಸಭೆಯ ಗಮನ ಸೆಳೆದರು.
ಕಳೆದ ವರ್ಷದ ಆಯವ್ಯಯವನ್ನೇ ನಕಲು ಮಾಡಲು ಹೋಗಿ ಅಂಕಿ ಅಂಶಗಳಲ್ಲಿ ತಪ್ಪಾಗಿದೆ. ಬಜೆಟ್ ನಮೂದಿಸುವ ಮೊದಲು ಈ ತಪ್ಪುಗಳನ್ನು ತಿದ್ದುವ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ ಎಂದು ಅವರು ಆಕ್ಷೇಪಿಸಿದರು.
ಸರಕಾರಿ ಆದೇಶ ಪಾಲನೆಯಾಗುತ್ತಿಲ್ಲ. ಬಜೆಟ್‌ನ ಗಾತ್ರ ಕಡಿಮೆಯಾಗಿದ್ದು, ನಿರಾಶಾದಾಯವಾಗಿದ್ದು, ಈ ಬಗ್ಗೆ ಪುನರ್ ಪರಿಶೀಲನೆ ಅಗತ್ಯ ಎಂದು ವಿಪಕ್ಷ ಸದಸ್ಯ ಪ್ರೇಮಾನಂದ ಶೆಟ್ಟಿ ಆಗ್ರಹಿಸಿದರು.
ನಗರ ಪ್ರದೇಶದಲ್ಲಿ 10 ಸೆಂಟ್ಸ್ ಭೂಮಿಗೆ ಸಿಂಗಲ್ ಸೈಟ್ (ಏಕ ನಿವೇಶನ) ಪರವಾನಿಗೆಯನ್ನು ಮಹಾನಗರ ಪಾಲಿಕೆಯಿಂದಲೇ ನೀಡುವಂತೆ ಸರಕಾರಿ ಆದೇಶವಾಗಿದ್ದರೂ ಈವರೆಗೆ ಕೇವಲ 52 ಪರವಾನಿಗೆಯನ್ನು ಮಾತ್ರವೇ ಮನಪಾದಿಂದ ವಿತರಿಸಲಾಗಿದೆ. ಇದರಿಂದಾಗಿ ಸಾರ್ವಜನಿಕರು ದಲ್ಲಾಳಿಗಳ ಮೂಲಕ ಮೂಡಾದಿಂದಲೇ ಏಕ ನಿವೇಶನಕ್ಕಾಗಿ ಅಲೆದಾಡುವ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.
ಕಳೆದ ಬಜೆಟ್‌ನಲ್ಲಿ ಪಿವಿಎಸ್‌ನಿಂದ ಲೇಡಿಹಿಲ್‌ವರೆಗೆ ಸ್ಮಾರ್ಟ್ ರಸ್ತೆ, ಮುಖ್ಯ ರಸ್ತೆಗಳಿಗೆ ನಾಮಫಲಕ ಅಳವಡಿಸುವ ಬಗ್ಗೆ ಘೋಷಿಸಲಾಗಿದ್ದರೂ ಈ ಬಗ್ಗೆ ಯಾವುದೇ ಕಾಮಗಾರಿ ಆಗಿಲ್ಲ ಎಂದು ಸದಸ್ಯ ರಾಜೇಶ್ ಆಕ್ಷೇಪಿಸಿದರು.
ಇಂದಿರಾ ಕ್ಯಾಂಟೀನ್ ಖರ್ಚಿನ ಬಗ್ಗೆ ಆಕ್ಷೇಪ
ಇಂದಿರಾ ಕ್ಯಾಂಟೀನ್ ರಾಜ್ಯ ಸರಕಾರದ ಯೋಜನೆಯಾಗಿದ್ದರೂ ಅದರ ಖರ್ಚು ವೆಚ್ಚಗಳನ್ನು ಮನಪಾದಿಂದ ಭರಿಸುವುದನ್ನು ತೋರಿಸಿರುವುದು ಯಾಕೆ ಎಂದು ವಿಪಕ್ಷ ಸದಸ್ಯರು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮುಹಮ್ಮದ್ ನಝೀರ್, ನಗರದ ಐದು ಕಡೆ ಇಂದಿರಾ ಕ್ಯಾಂಟೀನ್ ತೆರೆಯಲು ಸ್ಥಳ ಗುರುತಿಸಿ ಕಾಮಗಾರಿ ನಡೆಯುತ್ತಿದೆ ಎಂದರು.
ಕಟ್ಟಡ ಕಾಮಗಾರಿ ವೆಚ್ಚವನ್ನು ರಾಜ್ಯ ಸರಕಾರ ವಹಿಸಲಿದ್ದು, ಅದಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳಾದ ಒಳಚರಂಡಿ, ವಿದ್ಯುತ್ ಹಾಗೂ ನೀರಿನ ವ್ಯವಸ್ಥೆಯನ್ನು ಮಹಾನಗರ ಪಾಲಿಕೆಯಿಂದ ಮಾಡಲಾಗುತ್ತಿದೆ. ಅದಕ್ಕಾಗಿ ಒಟ್ಟು 25 ಲಕ್ಷ ರೂ.ಗಳನ್ನು ಕಾದಿರಿಸಲಾಗಿದೆ. ಕ್ಯಾಂಟೀನ್‌ನಲ್ಲಿ ನೀಡಲಾಗುವ ಆಹಾರಕ್ಕೆ ಸಂಬಂಧಿಸಿ ಬೆಳಗ್ಗಿನ ಉಪಹಾರಕ್ಕೆ 5 ರೂ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ತಲಾ 10 ರೂ. ನಿಗದಿ ಪಡಿಸಲಾಗಿದೆ. ಇದು ಒಟ್ಟು 25 ರೂ.ಗಳಾಗಿದ್ದು, ಇದಕ್ಕೆ ಅಧಿಕೃತವಾಗಿ ಒಟ್ಟು 60 ರೂ. ಖರ್ಚಾಗುತ್ತದೆ. ಹಾಗಾಗಿ ಉಳಿದ 35 ರೂ.ಗಳ ವ್ಯತ್ಯಾಸದಲ್ಲಿ ಶೇ. 70ರಷ್ಟು ಮಹಾನಗರ ಪಾಲಿಕೆ ಭರಿಸಲಿದ್ದು, ಉಳಿದ ಶೇ. 30ನ್ನು ಕಾರ್ಮಿಕ ಇಲಾಖೆಯ ಅನುಾನದಿಂದ ಭರಿಸಲಾಗುತ್ತಿದೆ ಎಂದರು.
ಇದು ರಾಜ್ಯ ಸರಕಾರದ ಯೋಜನೆಯಾಗಿರುವಾಗ ಮನಪಾ ಆಹಾರದ ಖರ್ಚು ವೆಚ್ಚ ಭರಿಸುವುದು ಯಾಕೆ ಎಂಬ ಆಕ್ಷೇಪ ವಿಪಕ್ಷ ಸದಸ್ಯರಿಂದ ಸಭೆಯಲ್ಲಿ ವ್ಯಕ್ತವಾಯಿತು.
ವೇದಿಕೆಯಲ್ಲಿ ಉಪ ಮೇಯರ್ ರಜನೀಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಬ್ದುಲ್ ರವೂಫ್, ಸಬಿತಾ ಮಿಸ್ಕಿತ್, ನಾಗವೇಣಿ ಉಪಸ್ಥಿತರಿದ್ದರು.
ಕಷ್ಟವಾದರೂ ಕನ್ನಡದಲ್ಲೇ ಬಜೆಟ್ ಮಂಡಿಸಿದ ಪ್ರತಿಭಾ ಕುಳಾಯಿ !
ಬಜೆಟ್ ಸಭೆ ಆರಂಭವಾಗುತ್ತಿದ್ದಂತೆಯೇ ಹಣಕಾಸು, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ತಮ್ಮ ಮೀಸಲು ಆಸನದಲ್ಲಿದ್ದು ಬಜೆಟ್ ಮಂಡಿಸದೆ, ಮೇಯರ್ ಎದುರಿನ ಸದಸ್ಯರ ಸಾಲಿನ ಆಸನದಲ್ಲಿ ಬಜೆಟ್ ಮಂಡಿಸಲು ಮುಂದಾದಾಗ ವಿಪಕ್ಷ ಸದಸ್ಯರು ಆಕ್ಷೇಪಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ತಮ್ಮ ಮೀಸಲು ಸ್ಥಾನದಲ್ಲಿದ್ದುಕೊಂಡು ಬಜೆಟ್ ಮಂಡಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಪ್ರತಿಭಾ ಕುಳಾಯಿ ಪ್ರತಿಕ್ರಿಯಿ, ತಾನು ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸ ಮಾಡಿದ ಕಾರಣ ಅಲ್ಲಿ ಹಿಂದಿ ಭಾಷೆಯನ್ನೇ ಪ್ರಥಮ ಭಾಷೆಯಾಗಿ ಕಲಿತ ಕಾರಣ ಕನ್ನಡದಲ್ಲಿ ಓದುವುದು ತನಗೆ ಕಷ್ಟ. ಹಾಗಾಗಿದ್ದರೂ ಕಷ್ಟಪಟ್ಟು ನಾನು ಕನ್ನಡ ಓದಲು ಅಭ್ಯಾಸ ಮಾಡಿಕೊಂಡಿದ್ದೇನೆ. ಆದರೆ ತಪ್ಪುಗಳು ಆಗುವುದು ಬೇಡ ಎಂಬ ನಿಟ್ಟಿನಲ್ಲಿ ಮುಖ್ಯ ಸಚೇತಕರ ಮಾರ್ಗದರ್ಶನದಲ್ಲಿ ಈ ಆಸನದಲ್ಲಿದ್ದು, ತನಗೆ ಬಜೆಟ್ ಮಂಡಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರಾದರೂ, ಮೇಯರ್ ಕವಿತಾ ಸನಿಲ್ ಪ್ರತಿಕ್ರಿಯಿಸಿ, ಅವರಿಗೆ ಬಜೆಟ್ ಮಂಡಿಸಲು ಅವಕಾಶ ನೀಡೋಣ. ತಪ್ಪುಗಳಾದಲ್ಲಿ ನಾವು ಸರಿಪಡಿಸಿಕೊಂಡು ಓದೋಣ ಎಂದು ಹೇಳಿದ ಬಳಿಕ ಪ್ರತಿಭಾ ಕುಳಾಯಿಯವರು ಕೆಲವು ಕಡೆ ಅಂಕಿ ಅಂಶಗಳನ್ನು ಹೊರತುಪಡಿಸಿ ಕನ್ನಡದಲ್ಲಿಯೇ ಬಜೆಟ್ ಮಂಡನೆ ಮಾಡಿದರು.