ಕುಂದಾಪುರ: ವಸ್ತು ಪ್ರದರ್ಶನ ಉದ್ಘಾಟನೆ, ಆಕರ್ಷಕ ಮೆರವಣಿಗೆ
ಕುಂದಾಪುರ, ಫೆ. 26: ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಬುಡಕಟ್ಟು ಸಮ್ಮೇಳನದ ವಸ್ತುಪ್ರದರ್ಶನವನ್ನು ಧಾರವಾಡ ವಿವಿ ಜನಪದ ಅಧ್ಯಯನ ಕೇಂದ್ರದ ಡಾ.ಬಿ.ಎಲ್.ಪಟೇಲ್ ಉದ್ಘಾಟಿಸಿದರು. ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ವೈ. ರವೀಂದ್ರನಾಥ ರಾವ್ ಉಪಸ್ಥಿತರಿದ್ದರು.
ವಸ್ತು ಪ್ರದರ್ಶನದಲ್ಲಿ ಮನೆ ಮನೆಗಳಲ್ಲಿ ಕಂಡುಬರುವ ಹಳೆ ಕಾಲದ ವಸ್ತುಗಳಾದ ಭತ್ತ ಕುಟ್ಟುವ ಸಾಧನ, ತಿರಿ ನಿರ್ಮಿಸುವ ಸಾಧನ, ಪುರಾತನ ವಸ್ತುಗಳ ಪ್ರದರ್ಶನವನ್ನು ಸೂರ್ಗೋಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶ್ರೀನಿವಾಸ ನೇತೃತ್ವದಲ್ಲಿ ಸಿದ್ಧಗೊಳಿಸಲಾಗಿತ್ತು.
ಬುಡಕಟ್ಟು ಸಮುದಾಯದ ವಿವಿಧ ಕಾಲಘಟ್ಟದಲ್ಲಿ ಅವರ ಆಚಾರ- ವಿಚಾರ, ಸಾಂಸ್ಕೃತಿಕ ವೈವಿಧ್ಯಗಳ ಕುರಿತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಛಾಯಾಚಿತ್ರಗ್ರಾಹಕ ಮನೋಹರ್ ಕುಂದರ್ ಎರ್ಮಾಳು ಅವರ ವಿಶೇಷ ಯಾಚಿತ್ರಗಳ ಪ್ರದರ್ಶನವು ಇದೆ.
ಮನಸೆಳೆದ ಮೆರವಣಿಗೆ: ಸಮ್ಮೇಳನದ ಉದ್ಘಾಟನೆ ಮುನ್ನ ಸಮ್ಮೇಳನಾಧ್ಯಕ್ಷೆ ಪದ್ಮಶ್ರೀ, ನಾಡೋಜ ಪುರಸ್ಕೃತ ಸುಕ್ರಿ ಬೊಮ್ಮಗೌಡರನ್ನು ವೈಭವದ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. 3ನೇ ರಾಜ್ಯಮಟ್ಟದ ಈ ಬುಡಕಟ್ಟು ಸಮ್ಮೇಳನದ ಮೆರವಣಿಗೆಗೆ ಬೈಂದೂರಿನ ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ಡಾ. ಎಚ್.ಶಾಂತರಾಮ್ ಚಾಲನೆ ನೀಡಿದರು.
ಸಮ್ಮೇಳನಾಧ್ಯಕ್ಷರನ್ನು ತೆರೆದ ವಾಹನದಲ್ಲಿ ಕುಳ್ಳಿರಿಸಿ ಕುಂದಾಪುರ ಪೇಟೆಯಿಡಿ ಸಂಚರಿಸಿ ಸಮ್ಮೇಳನಕ್ಕೆ ಕರೆ ತರಲಾಯಿತು.ಅವರೊಂದಿಗೆ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ. ನಾರಾಯಣ ಶೆಟ್ಟಿ, ಡಾ.ಜಿ.ಎಂ.ಗೊಂಡ, ಕಾರ್ಯಕ್ರಮದ ಸಂಚಾಲಕ ಡಾ.ಶುಭಕರಾಚಾರಿ ಭಾಗವಹಿಸಿದ್ದರು.
ಕುಡುಬಿ ಸಮುದಾಯದ ಕೋಲಾಟ ನೃತ್ಯ, ಕೊರಗ ಸಮುದಾಯದ ಡೊಳ್ಳು ಕುಣಿತ, ಕೀಲುಗುದುರೆಯೊಂದಿಗೆ ಕಾಲೇಜಿನಿಂದ ಆರಂಭವಾದ ಮೆರವಣಿಗೆ ಶಾಸ್ತ್ರಿ ಸರ್ಕಲ್, ಪಾರಿಜಾತ ಸರ್ಕಲ್ ಮೂಲಕ ಮಾಸ್ತಿಕಟ್ಟೆಯಾಗಿ (ಹಳೆ ಬಸ್ ನಿಲ್ದಾಣ) ಮತ್ತೆ ಕಾಲೇಜಿಗೆ ಆಗಮಿಸಿತು. ಮೆರವಣಿಗೆಯಲ್ಲಿ ಭಂಡಾರ್‌ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಕರಾವಳಿಯ ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ಪ್ರಾದ್ಯಾಪಕರು ಭಾಗವಹಿಸಿದ್ದರು.