ಉಡುಪಿ: ನಾಡದೋಣಿ ಮೀನುಗಾರಿಕಾ ಸೀಮೆಎಣ್ಣೆ ಬಿಡುಗಡೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಉಡುಪಿ, ಫೆ.26: ನಾಡದೋಣಿ ಮೀನುಗಾರಿಕೆಗೆ ಸೀಮೆಎಣ್ಣೆ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಸಹಸ್ರ ಸಂಖ್ಯೆಯ ಮೀನು ಗಾರರು ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುು ಬೃಹತ್ ಪ್ರತಿಭಟನೆ ನಡೆಸಿದರು.
ಒಕ್ಕೂಟದ ಅಧ್ಯಕ್ಷ ಸೋಮಶೇಖರ್ ಖಾರ್ವಿ ಮಾತನಾಡಿ, ಅನೇಕ ವರ್ಷ ಗಳಿಂದ ಸರಕಾರ ನಾಡದೋಣಿ ಮೀನುಗಾರರಿಗೆ ಸೆಪ್ಟೆಂಬರ್ ತಿಂಗಳನಿಂದ ಮೇ ತಿಂಗಳವರೆಗೆ ನ್ಯಾಯ ಬೆಲೆ ಅಂಗಡಿ ಹಾಗೂ ಮೀನುಗಾರಿಕಾ ಸಹಕಾರಿ ಸಂಘಗಳ ಮೂಲಕ ಸೀಮೆಎಣ್ಣೆಯನ್ನು ವಿತರಿಸುತ್ತಿದ್ದು, ಈ ವರ್ಷ ಕೂಡ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಸೀಮೆಎಣ್ಣೆ ನೀಡಿದೆ. ಆದರೆ ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳ ಸೀಮೆಎಣ್ಣೆಯನ್ನು ಇನ್ನೂ ವಿತರಣೆ ಮಾಡಿಲ್ಲ ಎಂದು ತಿಳಿಸಿದರು.
ಸರಕಾರದ ಆದೇಶದ ಪ್ರಕಾರ ಸೀಮೆಎಣ್ಣೆ ವಿತರಣೆಗೆ ಬೇಕಾದ ಅನುದಾನ ವನ್ನು ಬಿಡುಗಡೆ ಮಾಡಲಾಗಿದೆ. ಆದರೆ ಆಹಾರ ನಿಗಮದಿಂದ ಸೀಮೆಎಣ್ಣೆ ಯನ್ನು ವಿತರಣೆ ಮಾಡಿಲ್ಲ. ಮೀನುಗಾರಿಕೆಗೆ ಇನ್ನೂ ಮಾರ್ಚ್, ಎಪ್ರಿಲ್, ಮೇ ತಿಂಗಳ ಸೀಮೆಎಣ್ಣೆ ಅಗತ್ಯವಿದ್ದು, ಈ ಉದ್ಯೋಗ ಮಾಡಬೇಕಾದರೆ ಸೀಮೆಎಣ್ಣೆ ಹೊರತುಪಡಿಸಿ ಬೇರೆ ಮಾರ್ಗವೂ ಇಲ್ಲ. ಈಗಾಗಲೇ ಮೂರು ತಿಂಗಳಿನಿಂದ ಸೀಮೆಎಣ್ಣೆ ವಿತರಣೆ ಆಗದೆ ಇರುವುದರಿಂದ ಮೀನುಗಾರಿಕೆ ಮಾಡಲು ಸಾಧ್ಯವಾಗದೆ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ಅವರು ದೂರಿದರು.
ಆದುದರಿಂದ ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಬೇಕಾದ ಸೀಮೆಎಣ್ಣೆಯನ್ನು ತಕ್ಷಣವೇ ವಿತರಿಸಲು ಕ್ರಮಕೈಗೊಳ್ಳಬೇಕು. ಈ ಸಮಸ್ಯೆ ಪರಿಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಉಪೇಂದ್ರ ಪೈ ಸ್ಮಾರಕ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇದರಲ್ಲಿ ಜಿಲ್ಲೆ ವಿವಿಧೆಡೆಗಳಿಂದ ಸಾವಿರಾರು ಮೀನುಗಾರರು ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಂಜು ಬಿಲ್ಲವ, ಗೌರವಾಧ್ಯಕ್ಷರಾದ ಮದನ್ ಕುಮಾರ್ ಹಾಗೂ ನವೀನ್‌ಚಂದ್ರ, ಮುಖಂಡ ರಾದ ಜನಾರ್ದನ ತಿಂಗಳಾಯ, ಚಂದ್ರಕಾಂತ ಕರ್ಕೆರ, ಅಝೀಝ್ ಶಿರೂರು, ಸಾಹುಲ್, ದೇವದಾಸ ಖಾರ್ವಿ, ನರೇಶ್ ಖಾರ್ವಿ, ಸುರೇಶ್ ಖಾರ್ವಿ, ಅಣ್ಣಯ್ಯ ಖಾರ್ವಿ, ಮಾಜಿ ಶಾಸಕ ರಘುಪತಿ ಭಟ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.
ಸಮಸ್ಯೆ ಸರಕಾರದ ಗಮನಕ್ಕೆ: ಡಿಸಿ ಭರವಸೆ
ಮೀನುಗಾರರಿಂದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಮೀನುಗಾರರಿಗೆ ಪಡಿತರ ಮೂಲಕ ಸೀಮೆಎಣ್ಣೆ ವಿತರಿಸುವ ಕ್ರಮವನ್ನು ಕೇಂದ್ರ ಸರಕಾರ ರದ್ದುಗೊಳಿಸಿದೆ.ಇದೀಗ ಕೈಗಾರಿಕೆಗಳಿಗೆ ಸೀಮಿತಗೊಳಿಸಿರುವ ಸೀಮೆಎಣ್ಣೆಯನ್ನು ವಿತರಿಸಲು ಕ್ರಮ ತೆಗೆದು ಕೊಳ್ಳಲಾಗುತ್ತದೆ. ಆದರೆ ಅದಕ್ಕೆ ದರ ನಿಗದಿ ಪಡಿಸುವ ಕೆಲಸವನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ಇನ್ನೂ ಮಾಡಿಲ್ಲ ಎಂದರು.
ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳ ಬಾಕಿ ಸೀಮೆಎಣ್ಣೆ ವಿತರಿ ಸುವ ಬಗ್ಗೆ ಇಲಾಖೆಯ ಆಯುಕ್ತರ ಗಮನಕ್ಕೆ ತರಲಾಗುವುದು. ಫೆ.28ರ ಕೊನೆ ದಿನಾಂಕದೊಳಗೆ ನ್ಯಾಯ ಬೆಲೆ ಅಂಗಡಿಗಳಿಗೆ ಟ್ಯಾಂಕರ್‌ಗಳಲ್ಲಿ ಸೀಮೆಎಣ್ಣೆ ಸರಬರಾಜು ಮಾಡುವ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.