×
Ad

ಗೋಮಾಳ ವಾಸ್ತವ್ಯಕ್ಕೆ ಹಕ್ಕುಪತ್ರ ನೀಡದ ಅಧಿಕಾರಿಗಳ ವಿರುದ್ಧ ಉಡುಪಿ ತಾಪಂ ಸಭೆಯಲ್ಲಿ ಆಕ್ರೋಶ

Update: 2018-02-26 20:47 IST

ಉಡುಪಿ, ಫೆ.26: ಗೋಮಾಳ ಭೂಮಿಯಲ್ಲಿ ವಾಸವಾಗಿರುವ ಕುಟುಂಬ ಗಳಿಗೆ 94ಸಿ ಹಾಗೂ 94ಸಿಸಿ ಅಡಿಯಲ್ಲಿ ಹಕ್ಕುಪತ್ರ ನೀಡದ ಅಧಿಕಾರಿಗಳ ವಿರುದ್ಧ ಇಂದು ನಡೆದ ಉಡುಪಿ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಹಂದಾಡಿ ಗ್ರಾಪಂನ ಬೇಳೂರು ಎಂಬಲ್ಲಿರುವ ಗೋಮಾಳ ಜಾಗದಲ್ಲಿ ವಾಸವಾಗಿರುವ ಕೆಲವರಿಗೆ ಹಲವಾರು ವರ್ಷಗಳ ಹಿಂದೆ ಹಕ್ಕುಪತ್ರ ನೀಡಲಾಗಿತ್ತು. ಆದರೆ ಕೆಲವು ಮನೆ ಗಳಿಗೆ ನೀಡಿರಲಿಲ್ಲ ಎಂದರು.

ಈಗ 94ಸಿಸಿ ಅಡಿಯಲ್ಲಿ ಸಲ್ಲಿಸಲಾದ ಅರ್ಜಿ ಇತ್ಯರ್ಥ ಪಡಿಸದೆ ಬಾಕಿ ಇಡಲಾಗಿದೆ. ಇದಕ್ಕೆ ಗೋಮಾಳ ಭೂಮಿ ಎಂಬ ಕಾರಣವನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಈ ಹಿಂದೆ ಗೋಮಾಳಕ್ಕೆ ಹಕ್ಕುಪತ್ರ ನೀಡುವಾಗ ಈಗ ಯಾಕೆ ಆಗುತ್ತಿಲ್ಲ ಎಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕಂದಾಯ ಅಧಿಕಾರಿ ಈ ಬಗ್ಗೆ ಸಹಾಯಕ ಆಯುಕ್ತ ರಿಗೆ ಬರೆಯಲಾಗುವುದು ಎಂದರು.

ಇತ್ತೀಚೆಗೆ ಉಡುಪಿಗೆ ಭೇಟಿ ನೀಡಿದ ಕಂದಾಯ ಸಚಿವರು ಗೋಮಾಳದಲ್ಲಿ ವಾಸ್ತವ್ಯ ಇರುವವರಿಗೂ ಹಕ್ಕುಪತ್ರ ನೀಡಬಹುದು ಎಂದು ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಆ ಬಗ್ಗೆ ಕೆಲಸ ಮಾಡುತ್ತಿಲ್ಲ ಎಂದು ಸದಸ್ಯ ಭುಜಂಗ ಶೆಟ್ಟಿ ಆರೋಪಿಸಿದರು. ಗೋಮಾಳದಲ್ಲಿ 94ಸಿ, 94ಸಿಸಿಯಡಿ ಹಕ್ಕುಪತ್ರ ನೀಡಲು ಅವಕಾಶ ಇದೆ ಎಂದು ಸದಸ್ಯೆ ಡಾ.ಸುನೀತಾ ಶೆಟ್ಟಿ ತಿಳಿಸಿದರು. ಇದಕ್ಕೆ ಪ್ರತಿ ಕ್ರಿಯಿಸಿದ ಅಧ್ಯಕ್ಷರು, ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಜರಗಿಸ ಬೇಕೆಂದು ಹೇಳಿದರು.

ಸಿಆರ್‌ಝೆಡ್ ನಿಯಮಗಳನ್ನು ನೆಪವಾಗಿಟ್ಟುಕೊಂಡು ಬಡವರಿಗೆ ಮನೆ ನಿರ್ಮಿಸಲು ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಡ್ಡಿ ಪಡಿಸು ತ್ತಿದ್ದಾರೆ ಎಂದು ಸುಧೀರ್ ಕುಮಾರ್ ಶೆಟ್ಟಿ ಸಭೆಯಲ್ಲಿ ದೂರಿದರು. ಮನೆ ನಿರ್ಮಿಸಲು ಸಿಆರ್‌ಝೆಡ್‌ನಿಂದ ನಿರಾಪೇಕ್ಷಣಾ ಪತ್ರ ಸಿಕ್ಕಿಲ್ಲ. ಅದಕ್ಕೆ ಪಂಚಾ ಯತ್ ಅಭಿವೃದ್ಧಿ ಅಧಿಕಾರಿಗಳು ತಡೆಯೊಡ್ಡಲು ಅವಕಾಶ ಇಲ್ಲ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ತಿಳಿಸಿದರು. ಈ ಸಂಬಂಧ ಪಿಡಿಒಗಳಿಗಾಗಿ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ನಿವೃತ್ತ ಲೆಕ್ಕಾಧಿಕಾರಿ ಸಂಜೀವ ಮರಕಾಲ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸಭೆಯಲ್ಲಿ ತಾಪಂ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನೀತಾ ಗುರು ರಾಜ್, ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News