ಅಡಿಕೆ ನಿಷೇಧ ವಿರುದ್ದ ಹೋರಾಟ ಅನಿವಾರ್ಯ- ಹರೀಶ್ ಕುಮಾರ್
ಪುತ್ತೂರು, ಫೆ. 26: ಅಡಕೆ ತಿಂದು ಯಾವುದೇ ರೋಗ ಬಂದ ಉದಾಹರಣೆ ನಮ್ಮ ಮುಂದಿಲ್ಲ. ಅಡಕೆ ನಮ್ಮ ಭಾಗದ ಆರ್ಥಿಕ ಶಕ್ತಿ ಮಾತ್ರವಲ್ಲ. ಅದು ನಮ್ಮ ಪರಂಪರೆಯ ಭಾಗವಾಗಿದೆ. ಅದನ್ನೀಗ ನಿಷೇಧಿಸಲು ಕೇಂದ್ರ ಸರಕಾರ ಮುಂದಾಗಿರುವುದು ಖಂಡನೀಯವಾಗಿದ್ದು, ಇದನ್ನು ವಿರೋಧಿಸಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಪುತ್ತೂರು ಬಸ್ಸು ನಿಲ್ದಾಣದ ಸಮೀಪದ ಗಾಂಧಿ ಕಟ್ಟೆ ಮುಂಬಾಗದಲ್ಲಿ ಅಡಕೆ ನಿಷೇಧ ಪ್ರಸ್ತಾವನೆ ಖಂಡಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕರಾವಳಿ ಮತ್ತು ಮಲೆನಾಡಿನ ಆರ್ಥಿಕ ಶಕ್ತಿಯ ಬೆನ್ನೆಲುಬಾಗಿರುವ ಅಡಕೆಯನ್ನು ನಿಷೇಧಿಸಲು ಕೇಂದ್ರ ಸರಕಾರ ಹೊರಟಿದೆ. ಇದೇನಾದರೂ ಜಾರಿಗೆ ಬಂದರೆ ರೈತರು ದಂಗೆ ಏಳುವುದು ಅನಿವಾರ್ಯ ಎಂದು ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ವೆಂಕಪ್ಪ ಗೌಡ ಮಾತನಾಡಿ, ಅಂದು ಅಡಕೆಗಾಗಿ ಪಾದಯಾತ್ರೆ ಮಾಡಿದ ಡಿ.ವಿ.ಸದಾನಂದ ಗೌಡರು ಈಗೆಲ್ಲಿದ್ದಾರೆ. ಬಸ್ ನಿಲ್ದಾಣದಲ್ಲಿ ಕಂಬಳಿ ಹೊದ್ದು ಮಲಗುವುದಾಗಿ ಹೇಳಿದ ಅವರ ಕಂಬಳಿ ಈಗೆಲ್ಲಿದೆ ಎಂದು ಪ್ರಶ್ನಿಸಿದರು. ವಿದೇಶದಿಂದ ಆಮದು ಮಾಡುವ ಅಡಕೆಗೆ 100 ಶೇ. ಆಮದು ಸುಂಕ ವಿಧಿಸಬೇಕು ಎಂದು ಆಗ್ರಹಿಸಿದ ಅವರು, ಕಾಂಗ್ರೆಸ್ ಸರಕಾರಗಳು 70 ವರ್ಷದಲ್ಲಿ ಒಮ್ಮೆಯೂ ಅಡಕೆ ಬೆಳೆಗಾರರಿಗೆ ತೆರಿಗೆ ಹಾಕಿರಲಿಲ್ಲ. ಈಗ ಬಿಜೆಪಿ ಸರಕಾರ ಅದಕ್ಕೂ ಜಿಎಸ್‌ಟಿ ಹಾಕಿದೆ. ಅದನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದರು.
ಹಿಂದೆ ಬಿಜೆಪಿಗರು ಅಡಕೆಗಾಗಿ ಪ್ರತಿಭಟನೆ ನಡೆಸಿದಾಗ ಅಡಕೆಯನ್ನು ರಸ್ತೆಗೆ ಚೆಲ್ಲಿ ಪ್ರದರ್ಶನ ಮಾಡಿದ್ದರು. ಆದರೆ ನಾವು ಹಾಗೆ ಮಾಡುವುದಿಲ್ಲ. ನಮಗೆ ಅಡಕೆ ಮೇಲೆ ಗೌರವವಿದೆ. ಅದು ನಮ್ಮ ರೈತರ ಜೀವಾಳ. ಅದಕ್ಕಾಗಿ ಇವತ್ತು ಅಡಕೆಯನ್ನು ವಾಹನದಲ್ಲಿಟ್ಟು ಮೆರವಣಿಗೆ ಮಾಡಿದ್ದೇವೆ. ಪೂಜೆ ಮಾಡಿ ಪ್ರತಿಭಟನೆ ಮಾಡಿದ್ದೇವೆ ಎಂದವರು ತಿಳಿಸಿದರು.
ಜಿಪಂ ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ, ಕೋಮು ಗಲಭೆ ಮಾಡಿ ಜನರ ನೆಮ್ಮದಿ ಕೆಡಿಸಿದರೂ ಬಿಜೆಪಿಗೆ ಇನ್ನೂ ನೆಮ್ಮದಿ ಸಿಕ್ಕಿಲ್ಲ ಎಂದು ಕಾಣುತ್ತದೆ. ಅದಕ್ಕಾಗಿ ಅದು ಈಗ ಅಡಕೆ ನಿಷೇಧ ಮಾಡಿ ರೈತರನ್ನು ಸಂಪೂರ್ಣ ಸೋಲಿಸಲು ಮುಂದಾಗಿದೆ. ತಕ್ಷಣ ಕೇಂದ್ರ ಸರಕಾರ ಅಡಕೆ ನಿಷೇಧ ಪ್ರಸ್ತಾಪದಿಂದ ಹಿಂದೆ ಸರಿಯಬೇಕು, ಅಡಕೆಯನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು. ಬಳಿಕ ಪ್ರತಿಭಟನಾಕಾರರು ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಪ್ರಸಾದ್ ಆಳ್ವ, ಅಮಳ ರಾಮಚಂದ್ರ, ಉಪ್ಪಿನಂಗಡಿ ವಿಟ್ಲ ಬ್ಲಾಕ್ ಅಧ್ಯಕ್ಷ ಮುರಳೀಧರ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಉಮಾನಾಥ ಶೆಟ್ಟಿ, ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಲೋಕೇಶ್ಚರಿ ವಿನಯಚಂದ್ರ, ವಿಟ್ಲ ಉಪ್ಪಿನಂಗಡಿ ಕಿಸಾನ್ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಯ್ದೀನ್ ಅರ್ಷದ್ ದರ್ಬೆ, ಪುಡಾ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕಾಂಗ್ರೆಸ್ ಸೇವಾದಳದ ಸಂಘಟಕ ಜೋಕಿಂ ಡಿಸೋಜ, ಪ್ರಮುಖರಾದ ಅಶೋಕ್ ಕುಮಾರ್ ಸಂಪ್ಯ, ಮಹೇಶ್ ರೈ ಅಂಕೊತ್ತಿಮಾರ್, ರೋಶನ್ ರೈ ಬನ್ನೂರು, ಫಝಲ್ ರಹೀಂ, ಸುದರ್ಶನ್ ಕಂಪ, ಶಿವನಾಥ ರೈ ಮೇಗಿನಗುತ್ತು, ವೇದನಾಥ ಸುವರ್ಣ, ಇಸಾಕ್ ಸಾಲ್ಮರ, ನೂರುದ್ದೀನ್ ಸಾಲ್ಮರ, ಶ್ರೀರಾಮ ಪಕ್ಕಳ, ನಾರಾಯಣ ಪೂಜಾರಿ ಕೆಯ್ಯೂರು, ಸಂತೋಷ್ ಚಿಲ್ಮೆತ್ತಾರ್ ಮತ್ತಿತರರು ಉಪಸ್ಥಿತರಿದ್ದರು.