ಕೊಲ್ಲುವವನಿಗಿಂತ ಕಾಯುವ ದೇವರು ದೊಡ್ಡವನು: ಶಾಸಕ ಮಾಂಕಾಳು ವೈದ್ಯ
ಭಟ್ಕಳ, ಫೆ. 26: ನನ್ನನ್ನು ಮುಗಿಸಲು ಸಂಚು ರೂಪಿಸಿದ ವ್ಯಕ್ತಿ ಯಾರೇ ಇರಬಹುದು. ಕೊಲ್ಲುವವನಿಗಿಂತ ನನ್ನನ್ನು ಕಾಯುತ್ತಿರುವ ದೇವರು ದೊಡ್ಡವನು. ಭಗವಂತನ ರಕ್ಷಣೆ, ಕ್ಷೇತ್ರದ ಬಡ ಜನರ ಆಶೀರ್ವಾದ ನನ್ನ ಮೇಲೆ ಸದಾ ಇದ್ದೇ ಇರುತ್ತದೆ ಎಂದು ಶಾಸಕ ಮಾಂಕಾಳು ವೈದ್ಯ ಅವರು ರವಿವಾರ ಹೊನ್ನಾವರದಲ್ಲಿ ಕೈಯಲ್ಲೇ ಸಿಡಿಮದ್ದು ಸ್ಫೋಟಗೊಂಡ ಕಾರಣ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಇದು ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಮಾಂಕಾಳು ವೈದ್ಯರ ಹತ್ಯೆಗೆ ನಡೆದ ಸಂಚು ಎಂಬ ಆರೋಪಗಳು ಕೇಳಿ ಬರುತ್ತಿದೆ.
ನನ್ನ ಅಭಿವೃದ್ಧಿಯ ವೇಗ ಸಹಿಸದವರು ಇಂತಹ ಕೃತ್ಯ ಮಾಡುವ ಸಾಧ್ಯತೆಗಳಿದ್ದರೂ ನಾನು ಯಾರನ್ನೂ ಆರೋಪಿಸುವುದಿಲ್ಲ. ಆದರೆ ಇದು ರಾಜಕೀಯ ದುರುದ್ದೇಶದಿಂದಲೇ ಈ ಕೃತ್ಯ ನಡೆದಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಏಕೆಂದರೆ ಕೊಲ್ಲಲು ಬಂದವ ಜೀವಂತವಾಗಿದ್ದಾನೆ. ಆಧಾರ ಪ್ರಮಾಣ ಸಹಿತ ಆತನನ್ನು ಪೊಲೀಸರು ಹಿಡಿದ್ದಾರೆ. ತನಿಖೆಯಲ್ಲಿ ಎಲ್ಲವೂ ಬಹಿರಂಗಗೊಳ್ಳಲಿದೆ. ಡಾ. ಚಿತ್ತರಂಜನ್ ರ ಕೊಲೆಯ ನಂತರ ಶಾಸಕನ ಹತ್ಯೆಗೆ ಪ್ರಯತ್ನಿಸಿದ್ದು, ಇದು ಮೊದಲ ಘಟನೆಯಾಗಿದ್ದು ಇದರಿಂದಾಗಿ ಕ್ಷೇತ್ರದ ಜನರು ತುಂಬ ನೊಂದುಕೊಂಡಿದ್ದಾರೆ. ರಾಜಕೀಯವಾಗಿ ನನ್ನನ್ನು ತುಳಿಯುವ ಹಲವು ಪ್ರಯತ್ನಗಳು ನಡೆದಿವೆ. ಆದರೆ ಇಂತಹ ಮಾರ್ಗ ತುಳಿಯುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ. ನನಗೆ ದೇವರ ಮೇಲೆ ಅಪಾರ ನಂಬಿಕೆಯಿದೆ. ನನ್ನ ಕ್ಷೇತ್ರದ ಜನರೇ ನನ್ನ ಭದ್ರತೆಗೆ ನಿಂತುಕೊಂಡಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆ ಸೂಕ್ತ ತನಿಖೆ ಕೈಗೊಳ್ಳುತ್ತದೆ. ಪೊಲೀಸರ ಮೇಲೆ ನನಗೆ ಸಂಪೂರ್ಣವಾದ ವಿಶ್ವಾಸವಿದೆ. ಅವರ ಕಾರ್ಯಕ್ಷಮತೆಯ ಬಗ್ಗೆ ನನಗೆ ಸಂಶಯವಿಲ್ಲ. ಈ ಕೃತ್ಯದ ಹಿಂದೆ ಯಾರಿದ್ದಾರೆ? ಯಾಕಾಗಿ ಕೊಲೆ ಮಾಡಲು ಬಂದಿದ್ದ ಎಂಬ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯ ಸೂಕ್ತ ಉತ್ತರ ನೀಡಬಲ್ಲದು ಎಂದು ಶಾಸಕ ವೈದ್ಯ ಹೇಳಿದ್ದಾರೆ.