ಒಲಿಂಪಿಕ್ಸ್ ಕಂಪ್ಯೂಟರ್‌ಗಳಿಗೆ ಕನ್ನ ಹಾಕಿದ್ದು ರಶ್ಯ, ದೂರು ಉ. ಕೊರಿಯದ ಮೇಲೆ

Update: 2018-02-26 17:41 GMT

ವಾಶಿಂಗ್ಟನ್, ಫೆ. 26: ರಶ್ಯದ ಸೇನಾ ಬೇಹುಗಾರರು ದಕ್ಷಿಣ ಕೊರಿಯದಲ್ಲಿ ನಡೆದ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಬಳಸಲಾದ ನೂರಾರು ಕಂಪ್ಯೂಟರ್‌ಗಳಿಗೆ ಕನ್ನ ಹಾಕಿದ್ದಾರೆ ಹಾಗೂ ಅದು ಉತ್ತರ ಕೊರಿಯ ನಡೆಸಿದ ಕೃತ್ಯ ಎಂಬುದಾಗಿ ಬಿಂಬಿಸಿದ್ದಾರೆ ಎಂದು ಅಮೆರಿಕದ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ‘ವಾಶಿಂಗ್ಟನ್ ಪೋಸ್ಟ್’ ರವಿವಾರ ವರದಿ ಮಾಡಿದೆ.

ಫೆಬ್ರವರಿ 9ರಂದು ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ನಡೆಯುತ್ತಿರುವಂತೆಯೇ, ಹಲವಾರು ಒಲಿಂಪಿಕ್ ಸಂಬಂಧಿ ಇಂಟರ್‌ನೆಟ್ ಸೈಟ್‌ಗಳು ಮತ್ತು ಪ್ರಸಾರ ವ್ಯವಸ್ಥೆಗಳ ವೈಫಲ್ಯದ ಬಗ್ಗೆ ತನಿಖೆ ನಡೆಸುವುದಾಗಿ ದಕ್ಷಿಣ ಕೊರಿಯ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

ಒಲಿಂಪಿಕ್ ಸಂಘಟನೆಯೊಂದಿಗೆ ಜೋಡಣೆಯಾದ ಸುಮಾರು 300 ಕಂಪ್ಯೂಟರ್‌ಗಳ ನಿಯಂತ್ರಣವನ್ನು ರಶ್ಯದ ಜಿಆರ್‌ಯು ಸೇನಾ ಗುಪ್ತಚರ ಸಂಸ್ಥೆ ಫೆಬ್ರವರಿ ಆದಿ ಭಾಗದಲ್ಲೇ ಹೊಂದಿತ್ತು.

ಇದರ ಪರಿಣಾಮವಾಗಿ, ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದವರಿಗೆ ತಮ್ಮ ಟಿಕೆಟ್‌ಗಳನ್ನು ಮುದ್ರಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಸಮಾರಂಭದಲ್ಲಿ ಖಾಲಿ ಆಸನಗಳಿದ್ದವು.

ರಶ್ಯನ್ನರು ದಕ್ಷಿಣ ಕೊರಿಯದ ಕಂಪ್ಯೂಟರ್ ರೂಟರ್‌ಗಳಿಗೆ ಕನ್ನ ಹಾಕಿ ಒಂದು ರೀತಿಯ ‘ಕಳ್ಳ ಸಾಫ್ಟ್‌ವೇರ್ (ಮಾಲ್‌ವೇರ್)’ ಅಳವಡಿಸಿದ್ದಾರೆ ಹಾಗೂ ಈ ಮಾಲ್‌ವೇರ್ ಸಹಾಯದಿಂದ ಮಾಹಿತಿಯನ್ನು ಕದ್ದಿದ್ದಾರೆ ಹಾಗೂ ಕಂಪ್ಯೂಟರ್ ಜಾಲವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಈ ಕನ್ನ ದಾಳಿಯನ್ನು ಉತ್ತರ ಕೊರಿಯ ಮಾಡಿದೆ ಎಂದು ಬಿಂಬಿಸುವುದಕ್ಕಾಗಿ ‘ಫಾಲ್ಸ್ ಫ್ಲಾಗ್’ ಎನ್ನುವ ಕಾರ್ಯಾಚರಣೆ ಮೂಲಕ ಉತ್ತರ ಕೊರಿಯದ ಇಂಟರ್‌ನೆಟ್ ಪೂರೈಕೆದಾರ ಸಂಸ್ಥೆಯನ್ನು ಬಳಸಿದ್ದಾರೆ ಎಂದು ಅದು ತಿಳಿಸಿದೆ.

ರಶ್ಯ ತಂಡದ ನಿಷೇಧಕ್ಕೆ ಪ್ರತೀಕಾರವೇ?

ಉದ್ದೀಪನಾ ದ್ರವ್ಯ ಸೇವನೆಗಾಗಿ ರಶ್ಯ ತಂಡಕ್ಕೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದಕ್ಕೆ ನಿಷೇಧ ಹೇರಲಾಗಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.

ನಿಷೇಧಕ್ಕೆ ಪ್ರತೀಕಾರ ತೀರಿಸುವುದಕ್ಕಾಗಿ ಸೈಬರ್ ದಾಳಿ ನಡೆಸಲಾಗಿದೆ ಎಂಬುದಾಗಿ ಕೆಲವು ವಿಶ್ಲೇಷಕರು ಭಾವಿಸುತ್ತಾರೆ.

ಈ ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಮತ್ತು ಉತ್ತರ ಕೊರಿಯಗಳ ಆಟಗಾರರು ಒಂದೇ ತಂಡವಾಗಿ ಉದ್ಘಾಟನಾ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ ಹಾಗೂ ಉಭಯ ದೇಶಗಳು ಒಂದೇ ಐಸ್ ಹಾಕಿ ತಂಡವನ್ನು ಕಣಕ್ಕಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News