×
Ad

ಆಲಂಪುರಿ: ವೃಕ್ಷ ಉದ್ಯಾನವನಕ್ಕೆ ಸಚಿವ ರೈ ಶಿಲಾನ್ಯಾಸ

Update: 2018-02-26 22:10 IST

ಬಂಟ್ವಾಳ, ಫೆ. 26: ಪಶ್ಚಿಮಘಟ್ಟ ವ್ಯಾಪ್ತಿಯ ಸಸ್ಯ ಸಂಕುಲ ಹಾಗೂ ಗ್ರಾಮೀಣ ಜೀವನ ಶೈಲಿಯನ್ನು ಪರಿಚಯಿಸುವ ದೃಷ್ಠಿಯಿಂದ ಕಾವಳಪಡೂರು ಗ್ರಾಮದ ಆಲಂಪುರಿ ಸಾಲು ಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಸೋಮವಾರ ಶಿಲಾನ್ಯಾಸ ನೆರವೇರಿಸಿದರು.

ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಜಾಗತಿಕ ತಾಪಮಾನದಿಂದ ಪ್ರಾಕೃತಿಕ ಅಸಮತೋನ ಉಂಟಾಗಿದ್ದು, ಇದು ಮನುಷ್ಯರ ಮೇಲೆ ನೇರ ಪರಿಣಾಮ ಬೀರುತ್ತದೆ. ಇರುವುದು ಒಂದೇ ಭೂಮಿ. ಇದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. "ನೀರಿಗಾಗಿ ಅರಣ್ಯ" ಎಂಬ ಘೋಷಣೆಯಡಿ ಭೂಮಿಯನ್ನು ಹಚ್ಚ ಹಸಿರಾಗಿಸುವ ಮೂಲಕ ಅರಣ್ಯದ ಬಗ್ಗೆ ಜನರಿಗೆ ಮಾಹಿತಿ ನೀಡಲು ಇಂತಹ ವೃಕ್ಷೋದ್ಯಾನ ನಿರ್ಮಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಉದ್ಯಾನವನ ಇರಬೇಕು ಎಂಬ ಉದ್ದೇಶದಿಂದ ಇಂತಹ ಯೋಜನೆ ರೂಪಿಸಲಾಗಿದೆ. ಆಲಂಪುರಿ ಪ್ರದೇಶವು ಸಮುದ್ರಮಟ್ಟದಿಂದ ಎತ್ತರದಲ್ಲಿದೆ. ಏರು ತಗ್ಗುಗಳಿಂದ ನೈಸರ್ಗಿಕ ಸೌಂದರ್ಯದಿಂದ ಕೂಡಿದ ಪ್ರದೇಶವಾಗಿದೆ. ಉದ್ದೇಶಿತ ಟ್ರೀಪಾರ್ಕ್ ಸಮೀಪದಲ್ಲಿ ಪುಟ್ಟ ಕೊಳಗಳಿದ್ದು, ಅಂತಿಮವಾಗಿ ಸಮೀಪದ ನೇತ್ರಾವತಿ ಸೇರುತ್ತದೆ. ಈ ಪ್ರದೇಶದಿಂದ 2 ಕಿ.ಮೀ ದೂರದಲ್ಲಿ ಕಾರಿಂಜೇಶ್ವರ ದೇವಸ್ಥಾನವಿರುವುದರಿಂದ ಕ್ಷೇತ್ರ ದರ್ಶನಕ್ಕೆ ಬಂದವರು ಟ್ರೀಪಾರ್ಕ್ ವೀಕ್ಷಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಅರಣ್ಯ ಭವನ ಬೆಂಗಳೂರು ಇದರ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ಮಾತನಾಡಿ, ಕಬ್ಬನ್ ಪಾರ್ಕ್ ಹೊರತು ಪಡಿಸಿ ಇತರ ಯಾವುದೇ ವೃಕ್ಷೋದ್ಯಾನ ಅಷ್ಟು ಪರಿಣಾಮಕಾರಿಯಾಗಿಲ್ಲ. ಆದರೆ ಆಲಂಪುರಿಯಲ್ಲಿ ನಿರ್ಮಾಣವಾಗಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವು ಇಲಾಖೆಯ ಹೊಸ ಹೆಜ್ಜೆಯಾಗಿದೆ. ಕಾಡಿನ ಬಗ್ಗೆ ಸಂಪೂರ್ಣ ಮಾಹಿತಿ ಸಹಿತ ಜಾನಪದ ಕಲೆಗಳನ್ನು ಪ್ರತಿಬಿಂಬಿಸುವ ನೂತನ ಪ್ರಯತ್ನ ಇದಾಗಿದೆ ಎಂದು ಮಾಹಿತಿ ನೀಡಿದರು.

ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಂಟು ವೃಕ್ಷೋದ್ಯಾನಗಳನ್ನು ನಿರ್ಮಿಸಲು ಅನುಮೋದನೆ ದೊರಕಿದ್ದು, ಈಗಾಗಲೇ 4 ಪಾರ್ಕ್‌ಗಳನ್ನು ನಿರ್ಮಿಸಲಾಗಿದೆ. ಆಲಂಪುರಿಯಲ್ಲಿ ನಿರ್ಮಾಣವಾಗಲಿರುವ ವೃಕ್ಷೋದ್ಯಾನದ ಡಿಪಿಆರ್ ಆಗಿದ್ದು, ಸುಮಾರು 1.50 ಕೋಟಿ ರೂ. ಅಂದಾಜಿಸಲಾಗಿದೆ. ಮುಂದಿನ 4 ತಿಂಗಳೊಳಗೆ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯೆ ಸಫ್ನಾ ವಿಶ್ವನಾಥ್, ಜಿಪಂ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಮಂಜುಳ ಮಾಧವ ಮಾವೆ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧನಲಕ್ಷ್ಮೀ ಸಿ.ಬಂಗೇರ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಕಾಂಗ್ರೆಸ್ ಮುಖಂಡ ಜನಾರ್ದನ ಚಂಡ್ತಿಮಾರ್, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಸಂಜಯ್ ಎಸ್. ಬಿಜ್ಜೂರು, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಲನ್ ವಿ., ಮಂಗಳೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಬಾಬಾ ರೈ ಎಸ್.ಎನ್., ಪಿ.ಜಿನರಾಜ ಆರಿಗ, ಉದಯ ಕುಮಾರ್, ನಾವೂರು ಗ್ರಾಪಂ ಅಧ್ಯಕ್ಷೆ ಗುಲಾಬಿ, ಮಾಣಿಕ್‌ರಾಜ ಜೈನ್, ಆಲ್ಫೆನ್ ಮೆನೇಜಸ್, ಬಂಟ್ವಾಳ ಉಪವಲಯ ಅರಣ್ಯಾಧಿಕಾರಿ ಪ್ರೀತಂ, ಅರಣ್ಯಾಧಿಕಾರಿಗಳಾದ ಕಾರಿಯಪ್ಪ, ಸಂಧ್ಯಾ, ಅನಿಲ್ ಕೆ., ಸುಬ್ಬಯ್ಯ ನಾಯ್ಕಾ, ವಿನಯ್ ಕುಮಾರ್, ಜಿತೇಶ್, ಬಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು. ಬಂಟ್ವಾಳ ವಲಯ ಅರಣ್ಯಾಧಿಕಾರಿ ಬಿ.ಸುರೇಶ್ ಸ್ವಾಗತಿಸಿದರು. ಆದಿರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News