×
Ad

ದ.ಕ.ಜಿಲ್ಲೆಯಲ್ಲಿ ನಡೆದ ಮಹಿಳಾ ಕೊಲೆಗಳ ಮರುತನಿಖೆಗೆ ಸೂಚನೆ: ನಾಗಲಕ್ಷ್ಮೀ ಬಾಯಿ

Update: 2018-02-26 22:21 IST

ಪುತ್ತೂರು, ಫೆ. 26: ಪುತ್ತೂರಿನಲ್ಲಿ 20 ವರ್ಷಗಳ ಹಿಂದೆ ನಡೆದಿದ್ದ ಸೌಮ್ಯ ಭಟ್ ಕೊಲೆ ಪ್ರಕರಣ, ನಾಲ್ಕು ವರ್ಷದ ಹಿಂದೆ ನಡೆದ ಧರ್ಮಸ್ಥಳದ ಸೌಜನ್ಯಾ  ಕೊಲೆ ಪ್ರಕರಣ, ಮೂರು ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಪುಷ್ಪಲತಾ ಕೊಲೆ ಪ್ರರಕಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೆಲವು ಪ್ರಮುಖ ಮಹಿಳಾ ಕೊಲೆ ಪ್ರಕರಣಗಳನ್ನು ಮರು ತನಿಖೆ ಮಾಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ದಶಕಗಳ ಹಿಂದೆ ನಡೆದ ಪುತ್ತೂರಿನ ಸೌಮ್ಯ ಭಟ್ ಕೊಲೆ ಪ್ರಕರಣ, ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಸೌಜನ್ಯಾ ಕೊಲೆ ಪ್ರರಕಣ ಹಾಗೂ ಪುತ್ತೂರಿನ ಕಬಕ ರೈಲ್ವೇ ಸೇತುವೆ ಬಳಿ ನಡೆದಿದ್ದ ಮುಸ್ಲಿಂ ಮಹಿಳೆಯರಿಬ್ಬರ ನಿಗೂಢ ಸಾವಿನ ಪ್ರಕರಣ, ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಸಮೀಪದ ಕಕ್ಕೂರಿನಲ್ಲಿ ನಡೆದ ವೆಂಕಟರಮಣ ಭಟ್ ಕುಟುಂಬದ ನಿಗೂಢ ಸಾವಿನ ಪ್ರರಕಣ ಇತ್ಯಾದಿಗಳನ್ನು ಪಟ್ಟಿ ಮಾಡಿದ್ದೇನೆ. ಇವೆಲ್ಲಾ ಪ್ರಕರಣಗಳನ್ನು ಮರು ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗುವುದು ಎಂದರು.

ಕೆಲವು ದಿನಗಳ ಹಿಂದೆಯಷ್ಟೇ ಸುಳ್ಯದಲ್ಲಿ ಸಾರ್ವಜನಿಕರ ಮುಂದೆಯೇ ಅಕ್ಷತಾ ಎಂಬ ವಿದ್ಯಾರ್ಥಿನಿಯ ಕೊಲೆ ನಡೆದಿದ್ದು ,ಇದೊಂದು ಅಮಾನುಷ ಕೃತ್ಯವಾಗಿದೆ. ಇಂತಹ ಘಟನೆಗಳಿಂದ ಮಹಿಳೆಯ ಪಾಲಿಗೆ ಭೀತಿಯ ವಾತಾವರಣ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆಗಳನ್ನು ಧರ್ಮಾಧಾರಿತವಾಗಿ ನೋಡಲಾಗುತ್ತಿದೆ. ಬೇರೆ ಧರ್ಮದವರು ಕೊಂದರೆ ಮಾತ್ರ ಅದರ ಬಗ್ಗೆ ಧ್ವನಿ ಎತ್ತಲಾಗುತ್ತದೆ, ಅದು ದೊಡ್ಡ ಸುದ್ದಿಯಾಗುತ್ತದೆ. ಸ್ವಧರ್ಮದವರು ಕೊಂದರೆ ಕೇಳೊರೇ ಇಲ್ಲ ಎಂಬಂತಾಗಿದೆ. ಇದು ಮನುಷ್ಯತ್ವದ ವಿರೋಧಿ ನೀತಿಯಾಗಿದೆ ಎಂದ ಅವರು ಮನುಷ್ಯತ್ವಕ್ಕಿಂತ ದೊಡ್ಡ ಧರ್ಮ ಯಾವುದು ಸ್ವಾಮಿ ಎಂದು ಅವರು ಪ್ರಶ್ನಿಸಿದರು.

ಸುಳ್ಯದಲ್ಲಿ ಎರಡು ದಿನಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಟನೆಯ ನೇತೃತ್ವದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ 5 ಸಾವಿರದಷ್ಟು ಮಂದಿ ನೆರೆದಿದ್ದರೂ ಯಾರೊಬ್ಬರೂ ಅಕ್ಷತಾ ಪ್ರಕರಣದ ಬಗ್ಗೆ ಚಕಾರ ಎತ್ತಿಲ್ಲ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ಪತ್ನಿಯಾಗಲೀ, ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿ ಅವರಾಗಲೀ, ಅಲ್ಲಿನ ಶಾಸಕ ಅಂಗಾರ ಅವರಾಗಲೀ ವಿದ್ಯಾರ್ಥಿನಿಯ ಕೊಲೆ ಘಟನೆಯ ಬಗ್ಗೆ ಮಾತೆತ್ತಿಲ್ಲ. ಮೃತಳ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ನಡೆಸುವ ಕನಿಷ್ಠ ಸೌಜನ್ಯ ತೋರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುತ್ತೂರಿನಲ್ಲಿ ಸೌಮ್ಯ ಭಟ್ ಕೊಲೆ ಪ್ರಕರಣ ನಡೆದ ಸಂದರ್ಭದಲ್ಲಿ ಪುತ್ತೂರಿಗೆ ಬೆಂಕಿ ಹಚ್ಚುವ ಕೆಲಸ ಮಾಡಿರುವ ಸದಾನಂದ ಗೌಡ, ಇಂತಹ ಪ್ರಕರಣ ಗಳನ್ನು ರಾಜಕೀಯ ಲಾಭಕ್ಕೋಸ್ಕರ ಬಳಸಿಕೊಳ್ಳುತ್ತಿರುವ ಈ ಭಾಗದ ಸಂಸದರಾದ ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಇವರೆಲ್ಲ ಈಗ ಎಲ್ಲಿ ಹೋಗಿದ್ದಾರೆ, ಸಾವಿನ ಮನೆಯಲ್ಲಿ ರಾಜಕೀಯ ಮಾಡಿ ಬೇಳೆ ಬೇಯಿಸಿಕೊಳ್ಳುವ ಈ ಜನ ಈಗ ಯಾಕೆ ಸುಮ್ಮನಿದ್ದಾರೆ, ಸೌಮ್ಯ ಭಟ್, ಸೌಜನ್ಯಳಂತೆ ಅಕ್ಷತಾ ಕೂಡ ಹೆಣ್ಣು ಮಗಳಲ್ಲವೇ ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಕೂಡ ಅಕ್ಷತಾ ಮನೆಗೆ ಭೇಟಿ ನೀಡಿ ಪರಿಹಾರದ ವ್ಯವಸ್ಥೆ ಮಾಡುವ ಸೌಜನ್ಯ ತೋರಿಲ್ಲ ಎಂದು ಅವರು ಆರೋಪಿಸಿದರು.

ಬಡವರ ಮನೆಯ ಹೆಣ್ಣು ಮಗಳೊಬ್ಬಳು ಕೊಲೆಯಾದರೂ ಇಲ್ಲಿ ಕೇಳೋ ರಾಜಕಾರಣಿಗಳಿಲ್ಲ. ಇಲ್ಲಿನ ರಾಜಕಾರಣಿಗಳ ನೀತಿಯಿಂದ ಮನಸ್ಸಿಗೆ ನೋವಾಗುತ್ತಿದೆ, ಇನ್ನೊಂದು ಇಲ್ಲಿನ ರಾಜಕಾರಣಿಗಳು ಅನುಸರಿಸುತ್ತಿರುವ ನೀತಿಯ ಬಗ್ಗೆ ಹೇಳಲು ಹೇಸಿಗೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಾವಿನಲ್ಲೂ ಧರ್ಮ ನೋಡಬೇಡಿ, ಮನುಷ್ಯತ್ವ ಇಟ್ಟುಕೊಳ್ಳಿ, ಮನುಷ್ಯಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ ಎಂದು ಅವರು ಹೇಳಿದರು. ಸುಳ್ಯದ ಅಕ್ಷತಾ ಕೊಲೆ ಪ್ರರಕಣದಲ್ಲೂ ರಾಜಕೀಯ ಮಾಡಲಾಗಿದೆ. ಅಲ್ಲಿನ ಶಾಸಕ ಅಂಗಾರ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ದೂರಿದರು.

ಅಕ್ಷತಾ ಕೊಲೆ ಪ್ರಕರಣದ ಬಗ್ಗೆ ಈಗಾಗಲೇ ತಾನು ಜಿಲ್ಲಾ ಎಸ್ಪಿ ಜೊತೆ ಮಾತನಾಡಿದ್ದೇನೆ. ಕೊಲೆ ನಡೆದ ಸಂದರ್ಭದ ಸಿಸಿ ಟಿವಿ ಫೂಟೇಜ್‌ಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಕೊಲೆ ಮಾಡಿದ ವಿದ್ಯಾರ್ಥಿ ಸೈಕೋ ಸ್ವಭಾವಿ ಎಂದು ತಿಳಿಸಿದ್ದಾರೆ. ಈ ಯಾವ ಅಂಶಗಳೂ ಅಪರಾಧಿಗೆ ಶಿಕ್ಷೆ ನೀಡದಂತೆ ಮಾಡಬಾರದು ಎಂದು ಸೂಚನೆ ನೀಡಿದ್ದೇನೆ ಎಂದರು.

ಕೊಲೆಗೀಡಾದ ಅಕ್ಷತಾಳ ಕೇರಳದ ಮುಳ್ಳೇರಿಯಾದ ಮನೆಗೆ ರವಿವಾರ ಭೇಟಿ ನೀಡಿದ್ದೇನೆ. ಅವರದು ತೀರಾ ಬಡ ಕುಟುಂಬ. ಉತ್ತಮ ಶಿಕ್ಷಣ ಕೊಡಿಸಲೆಂದು ಮಗಳನ್ನು ಹೆತ್ತವರು ಸುಳ್ಯದ ಕಾಲೇಜಿಗೆ ಕಳುಹಿಸುತ್ತಿದ್ದರು. ಇಂಥ ಹುಡುಗಿಯ ಬರ್ಬರ ಕೊಲೆ ಮಾಡಲಾಗಿದೆ. ಸರ್ಕಾರದ ಸ್ಥೈರ್ಯ ನಿಧಿ ಯೋಜನೆಯಡಿಯಲ್ಲಿ ಆಕೆಯ ಹೆತ್ತವರಿಗೆ 25ಸಾವಿರ ರೂ . ನೀಡಿದ್ದೇನೆ. ಇನ್ನಷ್ಟು ಪರಿಹಾರ ನೀಡಲು ಸಾಧ್ಯವಾದರೆ ಕೊಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಿದ್ದೇನೆ. ಅಕ್ಷತಾಳ ಮನೆ ಸದಸ್ಯರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲೂ ಪ್ರಯತ್ನ ಮಾಡುತ್ತೇನೆ. ಸಂಸದರು ಅಕ್ಷತಾ ಕುಟುಂಬಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು. ಅವರ ಪ್ಯಾಕೇಟ್‌ನಿಂದ ಹಣ ಕೊಡುವುದು ಬೇಡ. ಸರ್ಕಾರದಿಂದ ಪರಿಹಾರ ಒದಗಿಸಿ ಕೊಡುವ ಕೆಲಸ ಮಾಡಲಿ ಎಂದು ಅವರು ಆಗ್ರಹಿಸಿದರು.

ಮಂಗಳೂರಿನಲ್ಲಿ ವೇಶ್ಯಾವಾಟಿಕೆ ದಂಧೆ ವಿಪರೀತ ಪ್ರಮಾಣದಲ್ಲಿ ನಡೆಯುತ್ತಿರುವ ಮಾಹಿತಿ ತನಗೆ ಲಭಿಸಿದೆ. ಮಂಗಳೂರಿನ ಕೆಲವು ಮನೆಗಳು, ರೆಸಾರ್ಟ್, ಹೋಂ ಸ್ಟೇಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಮಾಹಿತಿ ಇದ್ದು, ಇದರಲ್ಲಿ ಪೊಲೀಸರು ಕೂಡ ಶಾಮೀಲಾಗಿರುವ ಮಾಹಿತಿ ಲಭಿಸಿದೆ. ಈ ಬಗ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದ್ದು, ಎಲ್ಲೆಲ್ಲಿ ವೇಶ್ಯಾವಟಿಕೆ ದಂಧೆ ನಡೆಯುತ್ತಿದೆ ಎಂಬುವುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳುವ ಮೂಲಕ ಈ ದಂಧೆಗೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಎರಡು ತಿಂಗಳ ಹಿಂದೆ ನಾನು ಮಂಗಳೂರಿನಲ್ಲಿ ಪರಿಶೀಲನಾ ಸಭೆ ನಡೆಸಿದಾಗ ಹಿರಿಯ ಮಹಿಳೆಯೊಬ್ಬರು ಎದ್ದು ನಿಂತು ತಮ್ಮ ಕಾಲನಿಯ ಮನೆ ಯೊಂದರಲ್ಲೇ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ದಿನಕ್ಕೊಂದು ಮಹಿಳೆ ಅಲ್ಲಿಗೆ ಸರಬರಾಜಾಗುತ್ತಿತ್ತು. ಈಗ 15 ದಿನಕ್ಕೊಬ್ಬಳು ಯುವತಿಯನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದ್ದರು. ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೆ. ಗೃಹ ಸಚಿವರಿಗೂ ಪತ್ರ ಬರೆದಿದ್ದೆ. ಅವರು ಉತ್ತರ ನೀಡಿದ್ದಾರೆ. ಪೊಲೀಸ್ ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News