ಕಾಪು: ಮಣ್ಣು ಕುಸಿದು ಇಬ್ಬರು ಕಾರ್ಮಿಕರ ದಾರುಣ ಮೃತ್ಯು
ಕಾಪು, ಫೆ. 27: ಕಾಪು ಪುರಸಭಾ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಸಂದರ್ಭ ಮಣ್ಣು ಕುಸಿದು ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ಮೃತರನ್ನು ದಾವಣಗೆರೆ ಮೇಸರಹಳ್ಳಿ ನಿವಾಸಿ ದಾಸಪ್ಪ (49) ಮತ್ತು ಚಿತ್ರದುರ್ಗ ನಂದಿಪುರ ನಿವಾಸಿ ಉಮೇಶ್ (41) ಎಂದು ಗುರುತಿಸಲಾಗಿದೆ.
ಕರ್ನಾಟಕ ನೀರು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಬಿಡುಗಡೆಗೊಂಡಿರುವ 3 ಕೋಟಿ ರೂ. ವೆಚ್ಚದಲ್ಲಿ ಕಾಪು ಪುರಸಭಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ತ್ಯಾಜ್ಯ ನಿರ್ವಹಣೆಗಾಗಿ ಪೈಪ್‌ಲೈನ್ ಮತ್ತು ಮ್ಯಾನ್‌ಹೋಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಾಗಿ ಚರಂಡಿ ಅಗೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ಒಳಚರಂಡಿ ಕಾಮಗಾರಿಗಾಗಿ ಹೊಂಡ ತೆಗೆಯುವ ಕೆಲಸ ನಡೆಯುತಿತ್ತು. ರಸ್ತೆಯ ಮತ್ತೊಂದು ಮಗ್ಗುಲಿನಲ್ಲಿ ವಾಹನಗಳು ಸಂಚರಿಸುತ್ತಿದ್ದು, ಅದರ ಪರಿಣಾಮ ಭೂಮಿ ಅಲುಗಾಡಿದ್ದು, ಇದರಿಂದ ದಾಸಪ್ಪ ಹಾಗೂ ಉಮೆಶ್ ಅವರ ಮೇಲೆ ಮಣ್ಣು ಕುಸಿದು ಇಬ್ಬರು ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದರು.
ಕೂಡಲೇ ಜೆಸಿಬಿಯಲ್ಲಿ ಮಣ್ಣು ಹೊರ ತೆಗೆಯುವ ಕಾರ್ಯಾಚರಣೆ ನಡೆಸಲಾಯಿತು. ಆದರೆ ಜೆಸಿಬಿಯಿಂದ ಕಾರ್ಯಾಚರಣೆ ನಡೆಸಿದರೆ ಕಾರ್ಮಿಕರಿಗೆ ಗಾಯವಾಗಬಹುದು ಎಂಬ ಭೀತಿಯಲ್ಲಿ ಸ್ಥಳಕ್ಕೆ ಧಾವಿಸಿದ ಕಾಪುವಿನ ಸೂರಿ ಶೆಟ್ಟಿ ಸಹಿತ ಹಲವು ಮಂದಿ ಕಾರ್ಮಿಕರ ರಕ್ಷಣೆಗಾಗಿ ಧಾವಿಸಿದ್ದರು. ಸೂರಿ ಶೆಟ್ಟಿ ಅವರು ಕಾರ್ಯಾಚರಣೆ ನಡೆಸಿ, ಇಬ್ಬರನ್ನು ಮೇಲಕ್ಕೆ ಎತ್ತಿದರಾದರೂ, ಸುಮಾರು ಅರ್ಥ ಘಂಟೆಗೂ ಹೆಚ್ಚು ಮಣ್ಣಿನ ಅಡಿ ಇದ್ದುದರಿಂದ ಅವರು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಆ ವೇಳೆ ಇಬ್ಬರೂ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ದೇವಿಪ್ರಸಾದ್ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಯು ಕಾಮಗಾರಿಯ ಗುತ್ತಿಗೆ ವಹಿಸಿದ್ದು, ಉಪ ಗುತ್ತಿಗೆಯನ್ನು ನಾಗರಾಜ್ ಎಂಬವರಿಗೆ ನೀಡಲಾಗಿತ್ತು. ಅವರ ಮೂಲಕ ಕಾಮಗಾರಿ ನಡೆಯುತ್ತಿದೆ. ಕಳೆದ ತಿಂಗಳಿನಿಂದ ನಿರಂತರವಾಗಿ ಕಾಮಗಾರಿ ನಡೆಯುತ್ತಿದ್ದರೂ, ಗುತ್ತಿಗೆದಾರಾರು ಕಾರ್ಮಿಕರಿಗೆ ಸೂಕ್ತ ರಕ್ಷಣಾ ಕವಚಗಳನ್ನಾಗಲಿ, ಸಾಮಗ್ರಿಯನ್ನಾಗಲೀ ನೀಡಿಲ್ಲ. ಇದರಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಉಮೇಶ ಅವರು ಪತ್ನಿ ಒಂದು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ದಾಸಪ್ಪ ಅವರು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಪುರಸಭಾ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಎಚ್. ಉಸ್ಮಾನ್, ಮುಖ್ಯಾಧಿಕಾರಿ ರಾಯಪ್ಪ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್, ಕಾಪು ಎಸ್ಸೈ ನಿತ್ಯಾನಂದ ಗೌಡ ಘಟನಾ ಸ್ಥಳದಲ್ಲಿ ಪರಿಶೀಲನಾ ಕಾರ್ಯ ಮುಂದುವರಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.