ನಗರೋತ್ಥಾನ ಯೋಜನೆ: 18.5 ಕೋಟಿ ರೂ. ಕಾಮಗಾರಿಗೆ ಶಿಲಾನ್ಯಾಸ
ಉಡುಪಿ, ಫೆ.27: ನಗರೋತ್ಥಾನ ಯೋಜನೆಯಡಿ ಉಡುಪಿ ನಗರಸಭಾ ವ್ಯಾಪ್ತಿಗೆ 35 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ತಮ್ಮ ಅಧಿಕಾರಾ ವಧಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅತೀ ಹೆಚ್ಚಿನ ಅನುದಾನ ಬಿಡುಗಡೆ ಯಾಗಿ ಸದ್ವಿನಿಯೋಗವಾಗುತ್ತಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಅವರು ಮಂಗಳವಾರ ನಗರೋತ್ಥಾನದ ಕಾಮಗಾರಿ ಉದ್ಘಾಟನಯನ್ನು ಗೋಪಾಲಪುರ ವಾರ್ಡ್‌ನಿಂದ ಆರಂಭಿಸಿ ಕಡಿಯಾಳಿಯಲ್ಲಿ ಸಮಾಪ್ತಿ ಗೊಳಿಸಿದರು. ಒಟ್ಟು 18.5 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿರು.
ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ಥಳೀಯ ನಗರಸಭಾ ಸದಸ್ಯರ ಬೇಡಿಕೆ ಹಾಗೂ ಜನಸಂಪರ್ಕ ಸಭೆಯಲ್ಲಿ ಸ್ವೀಕರಿಸಿದ ಬೇಡಿಕೆಗಳಿಗೆ ಸ್ಪಂದಿಸಿ ಕಾಮಗಾರಿ ಗಳನ್ನು ಆರಂಭಿಸಿದ್ದು, ಎಲ್ಲೆಡೆ ಕಾಂಕ್ರೀಟ್ ರಸ್ತೆ, ಶಾಶ್ವತಕುಡಿಯುವ ನೀರು, ಒಳಚರಂಡಿ ವ್ಯವಸ್ಥೆಗೆ ಆದ್ಯತೆ ನೀಡಲಾಗಿದೆ. ನಗರದ ಸುವ್ಯವಸ್ಥಿತವಾಗಿರಲು ಮೂಲೂತ ಸೌಕರ್ಯಗಳಿರಬೇಕು ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ಮಲ್ಪೆ ಬೀಚ್‌ಗೆ ಅತಿ ಮುಖ್ಯ ಸಂಪರ್ಕ ರಸ್ತೆ ಮೂರು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ವಾಗಲಿದ್ದು, ಪ್ರವಾಸಿಗಳಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದ ಸಚಿವರು, ಎಲ್ಲಾ ಕಾಮಗಾರಿಗಳನ್ನು ಸಮಯ ಮಿತಿಯೊಳಗೆ, ಉತ್ತಮ ಗುಣಮಟ್ಟದಿಂದ ಕೈಗೊಳ್ಳ್ಳಬೇಕೆಂದರು.
ಸಚಿವರ ಜೊತೆಗೆ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಗಣೇಶ್ ನೇರ್ಗಿ, ಪ್ರಶಾಂತ್ ಅಮೀನ್, ಜಾನಕಿ ಗಣಪತಿ ಶೆಟ್ಟಿಗಾರ್, ರಶ್ಮಿತಾ ಬಾಲಕೃಷ್ಣ, ಸತೀಶ್ ಅಮೀನ್ ಪಡುಕೆರೆ, ರಮೇಶ್ ಕಾಂಚನ್, ಪ್ರಶಾಂತ್ ಭಟ್, ಶೋಭಾ ಕಕ್ಕುಂಜೆ, ಸೆಲಿನ ಕರ್ಕಡ, ನಾರಾಯಣ ಕುಂದರ್, ವಿಜಯ ಪೂಜಾರ್, ಹರೀಶ್ ರಾಂ ಉಪಸ್ಥಿತರಿದ್ದರು.